ADVERTISEMENT

ಸ್ಫೂರ್ತಿಯ ಮೂರ್ತಿ ಮಂಡೇಲಾ ಜನ್ಮಶತಾಬ್ದಿ

ಏಜೆನ್ಸೀಸ್
Published 17 ಜುಲೈ 2018, 19:40 IST
Last Updated 17 ಜುಲೈ 2018, 19:40 IST
   

ದಕ್ಷಿಣ ಆಫ್ರಿಕಾ: ವರ್ಣಭೇದ ನೀತಿಯ ವಿರುದ್ಧ ಹೋರಾಡಿ ದಕ್ಷಿಣ ಆಫ್ರಿಕಾಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ನೆಲ್ಸನ್‌ ಮಂಡೇಲಾ ಹುಟ್ಟಿ ಬುಧವಾರಕ್ಕೆ (ಜುಲೈ 18) ನೂರು ವರ್ಷಗಳಾಗಿವೆ. ಮಹಾನ್‌ ಹೋರಾಟಗಾರ ಮತ್ತು ಶಾಂತಿದೂತನ ಜನ್ಮಶತಮಾನೋತ್ಸವವನ್ನು ಆಫ್ರಿಕಾ ಮತ್ತು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ. ‘ಸಕ್ರಿಯರಾಗಿ, ಬದಲಾವಣೆಯ ಸ್ಫೂರ್ತಿ ತುಂಬಿ’ ಎಂಬುದು ಜನ್ಮ ಶತಮಾನೋತ್ಸವಕ್ಕೆ ನೆಲ್ಸನ್‌ ಮಂಡೇಲಾ ಪ್ರತಿಷ್ಠಾನವು ರೂಪಿಸಿದ ಘೋಷಣೆ.

ಒಬಾಮಾ ಭಾಷಣ
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಮಂಡೇಲಾ ಜನ್ಮಶತಮಾನೋತ್ಸವದ ಮುಖ್ಯ ಭಾಷಣ ಮಾಡಿದ್ದಾರೆ. 2017ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ಮಾಡಿದ ಅತ್ಯಂತ ಮಹತ್ವದ ಭಾಷಣ ಇದು ಎಂದು ಒಬಾಮ ಆಪ್ತರು ಅಭಿಪ್ರಾಯಪಟ್ಟಿದ್ದಾರೆ.

ಆಫ್ರಿಕಾದ ವಿವಿಧ ದೇಶಗಳಿಗೆ ಆಯ್ಕೆ ಮಾಡಲಾಗಿರುವ 200 ಯುವ ನಾಯಕರನ್ನು ಉದ್ದೇಶಿಸಿ ಒಬಾಮ ಅವರು ಬುಧವಾರ ಮಾತನಾಡಲಿದ್ದಾರೆ. ಈ ನಾಯಕರಿಗೆ ಐದು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ

ADVERTISEMENT

ಮುಂದೆ ಸಾಗದ ದೇಶ...
‘ಮಂಡೇಲಾ ಇದಿದ್ದದ್ದರೆ, ನನ್ನಲ್ಲಿ ಇರುವ ಹಾಗೆಯೇ ಅವರಲ್ಲಿಯೂ ದೇಶದ ಈಗಿನ ಪರಿಸ್ಥಿತಿಯ ಬಗ್ಗೆ ಭಾರಿ ಕಳವಳ ಇರುತ್ತಿತ್ತು’ ಎಂದು ಮಂಡೇಲಾ ಜತೆಗೆ ನೊಬೆಲ್‌ ಶಾಂತಿ ಪುರಸ್ಕಾರ ಹಂಚಿಕೊಂಡ ಎಫ್‌.ಡಬ್ಲ್ಯು.ಡಿ ಕ್ಲರ್ಕ್‌ ಹೇಳಿದ್ದಾರೆ.

ಜಗತ್ತಿನಲ್ಲಿಯೇ ಅತಿ ಹೆಚ್ಚು ಅಸಮಾನತೆ ಇರುವ ದೇಶ ದಕ್ಷಿಣ ಆಫ್ರಿಕಾ ಎಂದು ವಿಶ್ವಬ್ಯಾಂಕ್‌ನ ವರದಿ ಹೇಳಿದೆ. ದೇಶದ ಬಗ್ಗೆ ಮಂಡೇಲಾ ಹೊಂದಿದ್ದ ಕನಸುಗಳನ್ನು ಅವರ ನಂತರ ಬಂದ ನಾಯಕರು ನುಚ್ಚು ನೂರು ಮಾಡಿದ್ದಾರೆ ಎಂದು ಆ ದೇಶದ ಜನರು ಭಾವಿಸಿದ್ದಾರೆ.

ಮಂಡೇಲಾ ಪ್ರತಿಪಾದಿಸಿದ ಕಪ್ಪು ವರ್ಣೀಯರು ಮತ್ತು ಬಿಳಿಯರ ನಡುವಣ ಸಾಮರಸ್ಯದ ಬಗ್ಗೆಯೂ ಈಗಿನ ತಲೆಮಾರಿಗೆ ಅಂತಹ ಮೆಚ್ಚುಗೆ ಇಲ್ಲ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬಿಳಿಯರ ನಿಯಂತ್ರಣಕ್ಕೆ ಬಿಟ್ಟು ದೇಶವನ್ನು ಅವರಿಗೆ ಮಾರಿಬಿಟ್ಟರು ಎಂದು ಯುವ ಜನರು ಆರೋಪಿಸುತ್ತಿದ್ದಾರೆ.
***

ನೆಲ್ಸನ್‌ ಮಂಡೇಲಾರ ನೆನಪಿನಲ್ಲಿ ದಕ್ಷಿಣ ಆಫ್ರಿಕಾ ಹೊರತಂದಿರುವ ನೋಟು


ಬದುಕಿನ ಹೆಜ್ಜೆಗಳು...
1918 ಜುಲೈ 18: ಥೆಂಬು ರಾಜ ಕುಟುಂಬದಲ್ಲಿ ಜನನ

1943: ಆಫ್ರಿಕನ್‌ ನ್ಯಾಷನಲ್ ಕಾಂಗ್ರೆಸ್‌ಗೆ (ಎಎನ್‌ಸಿ) ಸೇರ್ಪಡೆ, ಮುಂದಿನ ವರ್ಷ ಪಕ್ಷದ ಯುವ ವಿಭಾಗ ಸ್ಥಾಪನೆ

1952: ವರ್ಣಭೇದ ನೀತಿಯ ವಿರುದ್ಧ ನಡೆದ ಪ್ರತಿರೋಧ ಅಭಿಯಾನದ ನೇತೃತ್ವ; ಅದೇ ವರ್ಷ ತಾಂಬೊ ಜತೆಗೂಡಿ ಜೊಹಾನ್ಸ್‌ಬರ್ಗ್‌ನಲ್ಲಿ ಕಾನೂನು ಸಲಹಾ ಸಂಸ್ಥೆ ಸ್ಥಾಪನೆ. ಕಪ್ಪುವರ್ಣೀಯರ ಮೊಲದ ಕಾನೂನು ಸಂಸ್ಥೆ ಇದು

1958: ವರ್ಣಭೇದ ನೀತಿ ವಿರುದ್ಧದ ಹೋರಾಟಗಾರ್ತಿ ವಿನ್ನಿ ಮಡಿಕಿಜೆಲಾ ಜತೆ ಎರಡನೇ ಮದುವೆ. 1996ರಲ್ಲಿ ಇವರು ವಿಚ್ಛೇದನ ಪಡೆದುಕೊಂಡರು

1961: ಐದು ವರ್ಷ ಹಿಂದೆ ಹೊರಿಸಲಾಗಿದ್ದ ರಾಷ್ಟ್ರದ್ರೋಹ‍ಪ್ರಕರಣದಲ್ಲಿ ಖುಲಾಸೆ. ಎಎನ್‌ಸಿಯ ಸಶಸ್ತ್ರ ವಿಭಾಗ ಆರಂಭ, ಕಮಾಂಡರ್‌ ಆಗಿ ಮಂಡೇಲಾ

1962: ದೇಶವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ಮತ್ತು ಕಾನೂನುಬಾಹಿರವಾಗಿ ದೇಶ ಬಿಟ್ಟು ಹೋದ ಪ್ರಕರಣದಲ್ಲಿ ಮಂಡೇಲಾ ಬಂಧನ

1964: ವಿಧ್ವಂಸಕ ಕೃತ್ಯ ಆರೋಪದಲ್ಲಿ ಮಂಡೇಲಾ ಮತ್ತು ವರ್ಣಭೇದ ನೀತಿ ವಿರುದ್ಧದ ಹಿರಿಯ ಹೋರಾಟಗಾರರ ವಿಚಾರಣೆ, ಎಲ್ಲರಿಗೂ ಜೀವಾವಧಿ ಶಿಕ್ಷೆ. ಕೇಪ್‌ಟೌನ್‌ನ ರಾಬೆನ್‌ ಐಲ್ಯಾಂಡ್‌ ಸೆರೆಮನೆಗೆ

1985: ಹಿಂಸಾತ್ಮಾಕ ಹೋರಾಟ ಕೈಬಿಡಬೇಕು ಎಂಬ ಷರತ್ತಿನೊಂದಿಗೆ ಅಧ್ಯಕ್ಷ ಪಿ.ಡಬ್ಲ್ಯು. ಬೋಥಾ ನೀಡಿದ ಕ್ಷಮಾದಾನ ತಿರಸ್ಕರಿಸಿದ ಮಂಡೇಲಾ

1990: 27 ವರ್ಷಗಳ ಸೆರೆವಾಸದ ಬಳಿಕ ಬಿಡುಗಡೆ

1991: ಎಎನ್‌ಸಿ ಅಧ್ಯಕ್ಷರಾಗಿ ಆಯ್ಕೆ

1993: ಮಂಡೇಲಾ ಮತ್ತು ವರ್ಣಭೇದ ನೀತಿ ಯುಗದ ಆಫ್ರಿಕಾದ ಕೊನೆಯ ಅಧ್ಯಕ್ಷ ಎಫ್‌.ಡಬ್ಲ್ಯು ಡಿ ಕ್ಲರ್ಕ್‌ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ

1994: ವರ್ಣಭೇದ ನೀತಿ ರದ್ದಾದ ನಂತರದ ಮೊದಲ ಚುನಾವಣೆಯಲ್ಲಿ ಎಎನ್‌ಸಿಗೆ ಗೆಲುವು, ಅಧ್ಯಕ್ಷರಾಗಿ ಮಂಡೇಲಾ ಆಯ್ಕೆ

1998: ಮೊಜಾಂಬಿಕ್‌ ಅಧ್ಯಕ್ಷರಾಗಿದ್ದ ಸಮೋರಾ ಮಾಷೆಲ್‌ ವಿಧವೆ ಗ್ರಾಸಾ ಮಾಷೆಲ್‌ ಜತೆ ಮದುವೆ

1999: ಅಧ್ಯಕ್ಷರಾಗಿ ಮೊದಲ ಅವಧಿ ಪೂರ್ಣಗೊಳಿಸಿ ಅಧಿಕಾರ ತ್ಯಾಗ

2013, ಡಿಸೆಂಬರ್‌ 5: ದೀರ್ಘ ಕಾಲದ ಅನಾರೋಗ್ಯದ ಬಳಿಕ ಮಂಡೇಲಾ ಸಾವು; ಆಗ ಅವರಿಗೆ 95 ವರ್ಷ ವಯಸ್ಸು

****

ಕಾರ್ಯಕ್ರಮಗಳು
* ಮಂಡೇಲಾ ವಿಧವೆ ಗ್ರಾಸಾ ಮಾಷೆಲ್‌ ನೇತೃತ್ವದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವಾಕಥಾನ್‌

* ಮಂಡೇಲಾ ಜೈಲಿನಿಂದ ಬರೆದ ಪತ್ರಗಳ ಪ್ರಕಟಣೆ

* ಸ್ಮಾರಕ ಬ್ಯಾಂಕ್‌ ನೋಟುಗಳ ಬಿಡುಗಡೆ

* ನೂರಾರು ಪರ್ವತಾರೋಹಿಗಳಿಂದ ಕಿಲಿಮಾಂಜರೋ ಪರ್ವತಾರೋಹಣ

* ಸಹಾಯಾರ್ಥ ಬೈಕ್‌ ರ್‍ಯಾಲಿ

* ನೂರು ಶಾಲೆಗಳಿಗೆ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ

* ಹತ್ತಾರು ವಸ್ತುಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಕ್ರೀಡಾ ಕೂಟಗಳು

ಸಮಾರೋಪ: ಬಿಯಾನ್ಸೆ, ಜೇ ಝೀ, ಎಡ್‌ ಶೀರನ್‌, ಫರೆಲ್‌ ವಿಲಿಯಮ್ಸ್‌ ಮತ್ತು ಕ್ಯಾಸ್ಪರ್‌ ನಯೊವೆಸ್ಟ್‌ ತಂಡದ ಸಂಗೀತ ಕಾರ್ಯಕ್ರಮದೊಂದಿಗೆ ಜನ್ಮಶತಮಾನೋತ್ಸವದ ಸಮಾರೋಪ ಇದೇ ಡಿಸೆಂಬರ್‌ನಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

**
ಅವರು ನಮ್ಮ ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಡಿದರು. ಆದರೆ ಆರ್ಥಿಕವಾಗಿ ನಾವು ಸ್ವತಂತ್ರರಾಗಲೇ ಇಲ್ಲ
ಟೇಟ್‌ ಫಕೇಲಾ, ಸೊವೆಟೋದ ಯುವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.