ADVERTISEMENT

ಮಿಯಾಮಿಯಲ್ಲಿ 12 ಅಂತಸ್ತಿನ ಕಟ್ಟಡ ಕುಸಿತ: ನೂರಾರು ಮಂದಿ ಸಿಲುಕಿರುವ ಶಂಕೆ

ಏಜೆನ್ಸೀಸ್
Published 25 ಜೂನ್ 2021, 6:29 IST
Last Updated 25 ಜೂನ್ 2021, 6:29 IST
ಮಿಯಾಮಿ ಸಮೀಪ ಸಮುದ್ರ ತೀರ ಪ್ರದೇಶದಲ್ಲಿರುವ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿರುವುದು (ಎಎಫ್‌ಪಿ ಚಿತ್ರ)
ಮಿಯಾಮಿ ಸಮೀಪ ಸಮುದ್ರ ತೀರ ಪ್ರದೇಶದಲ್ಲಿರುವ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿರುವುದು (ಎಎಫ್‌ಪಿ ಚಿತ್ರ)   

ಸರ್ಫ್‌ಸೈಡ್ (ಅಮೆರಿಕ): ಮಿಯಾಮಿ ಸಮೀಪ ಸಮುದ್ರ ತೀರ ಪ್ರದೇಶದಲ್ಲಿರುವ 12 ಅಂತಸ್ತಿನ ಕಟ್ಟಡದ ಒಂದು ಭಾಗ (ಗೋಪುರ) ಗುರುವಾರ ಬಹುತೇಕ ಕುಸಿದಿದ್ದು, ಹಲವರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದಾರೆ.

ಇಲ್ಲಿಯವರೆಗೆ ಒಂದು ಶವ ಸಿಕ್ಕಿದ್ದು, ಸುಮಾರು 12 ಜನರನ್ನು ರಕ್ಷಿಸಲಾಗಿದೆ. ಅವಶೇಷಗಳಡಿ 100ಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ ಇದ್ದು, ಸಾವು ನೋವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಬಹುಮಹಡಿ ಕಟ್ಟಡವು ಗುರುವಾರ ಮುಂಜಾನೆ 1.30ರ ಸಮಯದಲ್ಲಿ ಭಾಗಶಃ ಕುಸಿದಿದೆ. ಕಟ್ಟಡ ಕುಸಿಯುವ ಸಂದರ್ಭದಲ್ಲಿ ಎಷ್ಟು ನಿವಾಸಿಗಳು ಇದ್ದರು ಎಂಬುದರ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಅವಶೇಷಗಳಿಂದ ಮಗುವೊಂದನ್ನು ರಕ್ಷಿಸಲಾಗಿದೆ. ಅವರ ಪೋಷಕರು ಇನ್ನೂ ಪತ್ತೆಯಾಗಿಲ್ಲ. ಇನ್ನೊಂದೆಡೆ ತಾಯಿ ಮತ್ತು ಮಗುವನ್ನು ರಕ್ಷಿಸಲಾಗಿದೆ. ಆದರೆ ತಾಯಿಯು ಒಂದು ಕಾಲು ಕಳೆದುಕೊಂಡಿದ್ದಾರೆ ಎಂದು ಮಿಯಾಮಿಯ ತುರ್ತು ನಿರ್ವಹಣೆಯ ನಿರ್ದೇಶಕ ರೋಲಸನ್‌ ಹೇಳಿದ್ದಾರೆ.

ಸುಮಾರು 10ರಿಂದ 12 ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅತ್ಯಾಧುನಿಕ ಯಂತ್ರೋಪಕರಣಗಳ ಜತೆಗೆ, ಬದುಕುಳಿದಿರುವವ ಮತ್ತು ಮೃತರ ಪತ್ತೆಗೆ ಶ್ವಾನಗಳನ್ನೂ ಬಳಸಲಾಗಿದೆ.

ಕಟ್ಟಡದ ಕುಸಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ ಲಭ್ಯವಾಗಿರುವ ವೀಡಿಯೊವೊಂದರ ತುಣುಕಿನಲ್ಲಿ, ಕಟ್ಟಡದ ಮಧ್ಯಭಾಗವು ಮೊದಲು ಬೀಳುವಂತೆ ಕಾಣಿಸಿಕೊಂಡಿದ್ದು ಕ್ರಮೇಣ ಇಡೀ ಕಟ್ಟಡ ಕುಸಿದು, ದೊಡ್ಡ ಪ್ರಮಾಣದಲ್ಲಿ ಧೂಳು ಅವರಿಸಿದ್ದು ಗೋಚರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಹುತೇಕ 2 ಕೊಠಡಿಯ ಫ್ಲ್ಯಾಟ್‌ಗಳನ್ನು ಹೊಂದಿರುವ ಈ ಬಹುಮಹಡಿ ಕಟ್ಟಡ ನಿರ್ಮಾಣವಾಗಿದ್ದು 1981ರಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.