ADVERTISEMENT

'ನನ್ನ ಅಪಹರಣದಲ್ಲಿ ಪ್ರೇಯಸಿ ಕೈವಾಡ': ಇಲ್ಲಿದೆ ಚೋಕ್ಸಿಗೆ ಬಾರ್ಬರಾ ಉತ್ತರ

ಏಜೆನ್ಸೀಸ್
Published 8 ಜೂನ್ 2021, 14:06 IST
Last Updated 8 ಜೂನ್ 2021, 14:06 IST
ಬಾರ್ಬರಾ ಇನ್‌ಸ್ಟಾಗ್ರಾಮ್, ಚೋಕ್ಸಿ ಟ್ವಿಟರ್ ಖಾತೆಯ ಚಿತ್ರ
ಬಾರ್ಬರಾ ಇನ್‌ಸ್ಟಾಗ್ರಾಮ್, ಚೋಕ್ಸಿ ಟ್ವಿಟರ್ ಖಾತೆಯ ಚಿತ್ರ   

ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13,500 ಕೋಟಿ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಇದೀಗ, ಡೊಮಿನಿಕಾ ದ್ವೀಪಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಎದುರಿಸಿದ್ದಾರೆ. ಈ ಮಧ್ಯೆ, ಆಂಟಿಗುವಾದಿಂದ ಡೊಮಿನಿಕಾಗೆ ನನ್ನನ್ನು ಅಪಹರಣ ಮಾಡಿ ಕರೆದೊಯ್ದಿದ್ದರ ಹಿಂದೆ ನನ್ನ ಗರ್ಲ್ ಫ್ರೆಂಡ್ ಬಾರ್ಬರಾ ಜರಾಬಿಕಾ ಕೈವಾಡವಿದೆ ಎಂದು ಆಂಟಿಗುವಾ ಪೊಲೀಸ್ ಕಮೀಷನರ್‌ಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ವರ್ಷದಿಂದ ಆಕೆ ನನಗೆ ಗೊತ್ತು. ಜೊಲ್ಲಿ ಹಾರ್ಬರ್‌ನ ನನ್ನ ನಿವಾಸದ ಎದುರುಗಡೆಯ ಮನೆಯಲ್ಲಿದ್ದ ಆಕೆ ಬಳಿಕ ಕೋಕೊ ಬೇ ಹೋಟೆಲ್‌ಗೆ ಶಿಫ್ಟ್ ಆಗಿದ್ದಳು ಎಂದು ಹೇಳಿದ್ಧಾರೆ.

ನನ್ನ ಮನೆಯ ಕೆಲಸಗಾರರ ಜತೆ ಸಲುಗೆಯಿಂದ ಇದ್ದ ಆಕೆಗೆ ನಾನೂ ಸಹ ಪರಿಚಿತನಾದೆ. ಬಳಿಕ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ಸಂಜೆ ವಾಯುವಿಹಾರಕ್ಕೂ ತೆರಳುತ್ತಿದ್ದೆವು ಎಂದು ಚೋಕ್ಸಿ ಹೇಳಿದ್ದಾರೆ.

ADVERTISEMENT

ಮೇ 23ರಂದು ಸಾರ್ವಜನಿಕ ಸ್ಥಳದಲ್ಲಿ ಭೇಟಿಗೆ ಬದಲು ತನ್ನನ್ನು ಮನೆಯಿಂದ ಪಿಕ್ ಮಾಡುವಂತೆ ಕೇಳಿದಳು. ಅದರಂತೆ ಸಂಜೆ 5.15ರ ಸುಮಾರಿಗೆ ಅವಳ ಮನೆಗೆ ಹೋಗಿದ್ದೆ. ವೈನ್ ಸೇವಿಸುತ್ತಿದ್ದ ಆಕೆ ಅದನ್ನು ಮುಗಿಸಿ ಹೊರಗೆ ತೆರಳೋಣವೆಂದು ತಿಳಿಸಿದಳು. ನಾವು ಮಾತನಾಡುತ್ತಿದ್ದಂತೆ ನಮ್ಮ ಹಿಂದೆ ದೊಡ್ಡ ಶಬ್ದವಾಯಿತು. 8–10 ಮಂದಿ ಬಲಿಷ್ಠ ವ್ಯಕ್ತಿಗಳು ಅಲ್ಲಿಗೆ ಬಂದರು. ಆಂಟಿಗುವಾ ಪೊಲೀಸರೆಂದು ಹೇಳಿಕೊಂಡ ಅವರು ನನ್ನ ಬಗ್ಗೆ ಎಲ್ಲವೂ ತಿಳಿದಿದೆ. ಸೆಂಟ್ ಜಾನ್ಸ್ ಪೊಲೀಸ್ ಠಾಣೆಗೆ ನಿಮ್ಮನ್ನು ಭದ್ರತೆಯಲ್ಲಿ ಕರೆದೊಯ್ಯುವುದಾಗಿ ಹೇಳಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ನಾನು ನನ್ನ ವಕೀಲರನ್ನು ಸಂಪರ್ಕಿಸುವ ಮನವಿ ಮಾಡಿದೆ. ಅದಕ್ಕೆ ಅವಕಾಶ ಕೊಡದ ಅವರು ಜೋರಾಗಿ ತಳ್ಳಿ, ಹಲ್ಲೆ ನಡೆಸಿದರು ಎಂದು ಚೋಕ್ಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಳಿಕ ನನ್ನನ್ನು ನನ್ನ ಗೆಳತಿ ಜರಾಬಿಕಾ ನಿವಾಸದ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿದ್ದ ಚಿಕ್ಕ ಹಡಗಿನಲ್ಲಿ ಹಾಕಿದರು. ಈ ಎಲ್ಲ ಘಟನೆ ನಡೆಯುತ್ತಿದ್ದಾಗಲೂ ನನ್ನ ಗೆಳತಿ ನನ್ನ ರಕ್ಷಣೆಗೆ ಬರಲಿಲ್ಲ. ಕೊನೆ ಪಕ್ಷ ಪೊಲೀಸರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಿಲ್ಲ. ಹೀಗಾಗಿ, ಈ ಅಪಹರಣದ ಹಿಂದೆ ಅವಳ ಕೈವಾಡ ಇರುವುದು ಸ್ಪಷ್ಟ ಎಂದು ಚೋಕ್ಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಳಿಕ, ನನ್ನನ್ನು ದೊಡ್ಡ ಹಡಗಿಗೆ ಶಿಫ್ಟ್ ಮಾಡಲಾಯಿತು ಎಂದಿರುವ ಚೋಕ್ಸಿ, ಆಗ ನನ್ನನ್ನು ಸೆಂಟ್ ಜಾನ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿಲ್ಲ ಎಂಬುದು ಸ್ಪಷ್ಟವಾಯಿತು. ಏಕೆಂದರೆ, ಠಾಣೆಗೆ ತೆರಳಲು ದೋಣಿಯ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಹಡಗಿನಲ್ಲಿ ಇಬ್ಬರು ಭಾರತೀಯರು ಮತ್ತು ಮೂವರು ಕೆರಿಬಿಯನ್ ಮೂಲದವರಿದ್ದರು. ಅವರು ಅತ್ಯಂತ ಕ್ರೂರ, ಅನುಭವಿ ಅಪಹರಣಕಾರರಂತೆ ಕಾಣುತ್ತಿದ್ದರು. ನನ್ನನ್ನು ಅಪಹರಿಸಲೆಂದೇ ಅವರನ್ನು ಕರೆತರಲಾಗಿದ್ದ ರೀತಿ ನನಗೆ ಅನ್ನಿಸಿತು ಎಂದಿದ್ದಾರೆ.

ನನ್ನ ಕೈವಾಡವಿಲ್ಲ– ಜರಾಬಿಕಾ:

ಚೋಕ್ಸಿ ಆರೋಪದ ಬಗ್ಗೆ ಇಂಡಿಯಾ ಟುಡೇ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಪ್ರೇಯಸಿ ಬಾರ್ಬರಾ ಜರಾಬಿಕಾ, ಅಪಹರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ.

‘ನಾನು ಚೋಕ್ಸಿಯ ಗೆಳತಿಯಾಗಿದ್ದೆ. ಚೋಕ್ಸಿ ತನ್ನನ್ನು ರಾಜ್ ಎಂದು ಪರಿಚಯಿಸಿಕೊಂಡಿದ್ದರು. ಕಳೆದ ವರ್ಷ ನನ್ನನ್ನು ಸಂಪರ್ಕಿಸಿದರು. ಸಲುಗೆ ಹೆಚ್ಚಾದಾಗ ಫ್ಲರ್ಟಿಂಗ್ ಪ್ರಾರಂಭಿಸಿದರು. ನನಗೆ ನಕಲಿ ವಜ್ರದ ಉಂಗುರಗಳು ಮತ್ತು ಬ್ರೇಸ್‌ಲೆಟ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು’ ಎಂದು ಬಾರ್ಬರಾ ಜರಾಬಿಕಾ ಹೇಳಿದ್ದಾರೆ.

‘ನನಗೂ ಈ ಅಪಹರಣಕ್ಕೂ ಯಾವುದೇ ಸಂಬಂಧ ಇಲ್ಲ. ಚೋಕ್ಸಿ ವಕೀಲರು ಮತ್ತು ಅವರ ಕುಟುಂಬದವರು ಈ ಪ್ರಕರಣದಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಇದರಿಂದ ನನ್ನ ಕುಟುಂಬ ಒತ್ತಡಕ್ಕೆ ಸಿಲುಕಿದೆ’ಎಂದು ಬಾರ್ಬರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.