ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡಿರುವ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಗ್ರಿಶಮ್ ಅವರು, ಈ ಹಿಂದೆ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅವರು ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಶ್ವೇತಭವನದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನಗೆ ದೇಶಕ್ಕೆ ಸೇವೆ ಸಲ್ಲಿಸಲು ದೊರೆತ ಗೌರವವಾಗಿದೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಮೆಲಾನಿಯಾ ಟ್ರಂಪ್ ಅವರು ಮಕ್ಕಳಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಿದ್ದರು. ನಾನೂ ಅವರ ಇಂಥ ಸೇವಾಕಾರ್ಯಗಳ ಭಾಗವಾಗಿದ್ದಕ್ಕೆ ತುಂಬಾ ಹೆಮ್ಮೆ ಎನಿಸಿದೆ. ಅವರ ಆಡಳಿತದ ಸಾಧನೆ ಬಗ್ಗೆಯೂ ಗೌರವವಿದೆ‘ ಎಂದು ಅವರು ಹೇಳಿದ್ದಾರೆ.
ಮ್ಯಾಥ್ಯೂಸ್ ಅವರೂ ಬುಧವಾರ ರಾಜೀನಾಮೆ ಸಲ್ಲಿಸಿದ್ದು, ‘ಟ್ರಂಪ್ ಬೆಂಬಲಿಗರು ನಡೆಸಿದ ದಾಂದಲೆ ನೋಡಿ, ತುಂಬಾ ಬೇಸರವಾಯಿತು. ತೀವ್ರ ತೊಂದರೆಯಾಯಿತು‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.