
ಗ್ವಾದಲಹಾರ: ಮೆಕ್ಸಿಕೊದ ಡ್ರಗ್ಸ್ ಜಾಲದ ಪಾತಕಿ, ‘ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್’ನ (ಸಿಜೆಎನ್‌ಜಿ) ಮುಖ್ಯಸ್ಥ ‘ಎಲ್ ಮೆಂಚೊ’ನ ಶವವನ್ನು ಚಿನ್ನದ ಪೆಟ್ಟಿಗೆಯಲ್ಲಿಟ್ಟು, ಬೃಹತ್ ಹೂಗುಚ್ಛಗಳನ್ನು ಅರ್ಪಿಸುವ ಮೂಲಕ ಸೇನಾ ಉಪಸ್ಥಿತಿಯಲ್ಲಿ ಸೋಮವಾರ ಸಮಾಧಿ ಮಾಡಲಾಯಿತು.
ಗ್ವಾದಲಹಾರದ ಉಪನಗರವಾದ ಜಪೋಪಾನ್‌ನಲ್ಲಿರುವ ಸ್ಮಶಾನದಲ್ಲಿ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಅಲಿಯಾಸ್ ಎಲ್ ಮೆಂಚೊನ ಅಂತ್ಯಕ್ರಿಯೆ ನಡೆಯಿತು. ಭದ್ರತಾ ಕಾರಣಗಳಿಗಾಗಿ ಸಮಾಧಿ ಸ್ಥಳದ ಬಗ್ಗೆ ಮಾಹಿತಿ ನೀಡಲು ಅಟಾರ್ನಿ ಜನರಲ್ ಕಚೇರಿ ನಿರಾಕರಿಸಿದೆ.
ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಅನೇಕರು ಕಪ್ಪು ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ಮೆಕ್ಸಿಕನ್ ಪ್ರಾದೇಶಿಕ ಸಂಗೀತದ ಬ್ಯಾಂಡ್‌ನೊಂದಿಗೆ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಂತ್ಯಕ್ರಿಯೆ ನಡೆದ ಸ್ಥಳದ ಸುತ್ತಲೂ ಭಾನುವಾರದಿಂದಲೇ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಬೃಹತ್ ಹೂಗುಚ್ಛಗಳನ್ನು ಸಮಾಧಿ ಮೇಲೆ ಇಡಲಾಗಿತ್ತು. ಹೂವಿನಿಂದ ಹುಂಜದ ಚಿತ್ರ ಬಿಡಿಸಿದ್ದ ಕಲಾಕೃತಿಗಳನ್ನು ಅಲ್ಲಲ್ಲಿ ಇಡಲಾಗಿತ್ತು. ಎಲ್ ಮೆಂಚೊನನ್ನು ‘ಹುಂಜಗಳ ಒಡೆಯ’ ಎಂದೂ ಕರೆಯಲಾಗುತ್ತಿತ್ತು.
ಫೆಬ್ರುವರಿ 22ರಂದು ಹಾಲಿಸ್ಕೊದ ಟಪಲ್ಪಾದಲ್ಲಿ ಸೇನೆಯು ನಡೆಸಿದ್ದ ಕಾರ್ಯಾಚರಣೆಯಲ್ಲಿ ಎಲ್ ಮೆಂಚೊ ಗಾಯಗೊಂಡಿದ್ದ. ಆತನ ಎದೆ, ಹೊಟ್ಟೆ ಮತ್ತು ಕಾಲುಗಳಿಗೆ ಗುಂಡುಗಳು ಹೊಕ್ಕಿದ್ದವು. ಮೆಕ್ಸಿಕೊ ನಗರಕ್ಕೆ ವಿಮಾನದಲ್ಲಿ ಕರೆದೊಯ್ಯುವಾಗ ಮೃತಪಟ್ಟಿದ್ದ. ಮರಣೋತ್ತರ ಪರೀಕ್ಷೆ ಬಳಿಕ ಫೆಬ್ರುವರಿ 28ರಂದು ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.
ಎಲ್ ಮೆಂಚೊನ ಹತ್ಯೆ ನಂತರ ಕಾರ್ಟೆಲ್‌ನ ಸದಸ್ಯರು ದೇಶದಾದ್ಯಂತ ರಸ್ತೆ ತಡೆ ನಡೆಸಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ನಡೆಸಿದ್ದರು. ಇದರಿಂದ ಅನೇಕರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.