ಘಟನೆ ಸಂಬಂಧ ವಾಲ್‌ಮಾರ್ಟ್ ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಪಡೆದರು.
–ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕದ ಮಿಚಿಗನ್ ರಾಜ್ಯದ ಟ್ರಾವರ್ಸ್ ಸಿಟಿ ಬಳಿಯ ವಾಲ್‌ಮಾರ್ಟ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಎದುರಿಗೆ ಸಿಕ್ಕವರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಘಟನೆ ಸಂಬಂಧ ಕೃತ್ಯವೆಸಗಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇದು ನಿಜವಾಗಿಯೂ ಭಯಾನಕವಾಗಿತ್ತು. ನಾನು ಮತ್ತು ನನ್ನ ಸಹೋದರಿ ಭಯಭೀತರಾಗಿದ್ದೆವು’ ಎಂದು 36 ವರ್ಷದ ಟಿಫಾನಿ ಡಿಫೆಲ್ ತಿಳಿಸಿದ್ದಾರೆ.
ಉತ್ತರ ಮಿಚಿಗನ್‌ನಲ್ಲಿರುವ ಆಸ್ಪತ್ರೆಯಲ್ಲಿ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುನ್ಸನ್ ಹೆಲ್ತ್‌ಕೇರ್ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದೆ.
‘ಈ ರೀತಿಯ ಹಿಂಸಾಚಾರದ ಘಟನೆ ಸ್ವೀಕಾರಾರ್ಹವಲ್ಲ. ಗಾಯಗೊಂಡವರಿಗೆ ಅಗತ್ಯ ನೆರವು ಒದಗಿಸಲಾಗುವುದು ಮತ್ತು ಘಟನೆ ನಡೆದ ಕೂಡಲೇ ತ್ವರಿತ ಕ್ರಮ ತೆಗೆದುಕೊಂಡವರಿಗೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಮಿಚಿಗನ್ ಗವರ್ನರ್ ಗ್ರೆಚೆನ್ ವಿಟ್ಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.