ADVERTISEMENT

ಉಕ್ರೇನ್‌ನಲ್ಲಿ ಕದನವಿರಾಮ ಘೋಷಿಸಿ: ಪ್ರಧಾನಿ ಮೋದಿ ಕರೆ

ರಷ್ಯಾದ ಮೇಲೆ ಭಾರತ ಪ್ರಭಾವ ಬೀರಲು ಡೆನ್ಮಾರ್ಕ್‌ ಪ್ರಧಾನಿ ಸಲಹೆ

ಪಿಟಿಐ
Published 3 ಮೇ 2022, 19:31 IST
Last Updated 3 ಮೇ 2022, 19:31 IST
ಡನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು – ಎಪಿ ಚಿತ್ರ
ಡನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು – ಎಪಿ ಚಿತ್ರ   

ಕೋಪನ್‌ಹೇಗನ್‌: ‘ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಬೇಕು. ಈ ಬಿಕ್ಕಟ್ಟು ಬಗೆಹರಿಸಲು ಉಕ್ರೇನ್ ಮತ್ತು ರಷ್ಯಾ ರಾಜತಾಂತ್ರಿಕ ಮಾತುಕತೆಯ ಹಾದಿಗೆ ಮರಳಬೇಕು’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಡೆನ್ಮಾರ್ಕ್‌ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರೊಂದಿಗೆ ಮಂಗಳ ವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು ವರದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಮೆಟ್ಟಿ ಫ್ರೆಡೆರಿಕ್ಸನ್‌ ಜತೆ ಉಕ್ರೇನ್ ಬಿಕ್ಕಟ್ಟಿನ ವಿಚಾರವಾಗಿಯೂ ಮಾತು ಕತೆ ನಡೆಸಿದ್ದೇನೆ ಎಂದ ಮೋದಿ, ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಲಿ ಎಂದರು.

ADVERTISEMENT

‘ಉಕ್ರೇನ್ ವಿಚಾರದಲ್ಲಿ ಭಾರತವು ರಷ್ಯಾ ಮೇಲೆ ತನ್ನ ಪ್ರಭಾವ ಬೀರಲಿದೆ ಎಂದು ಭಾವಿಸುತ್ತೇನೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧ ಹಾಗೂ ಹತ್ಯೆಯನ್ನು ನಿಲ್ಲಿಸಬೇಕು’ ಎಂದು ಮೆಟ್ಟಿ ಫ್ರೆಡೆರಿಕ್ಸನ್‌ ಹೇಳಿದರು.

‘ನನ್ನ ಸಂದೇಶ ಸ್ಪಷ್ಟವಾಗಿದೆ. ಪುಟಿನ್ ಅವರು ಯುದ್ಧ ಮತ್ತು ಹತ್ಯೆಯನ್ನು ನಿಲ್ಲಿಸಬೇಕು. ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮೇಲೆ ಭಾರತವು ತನ್ನ ಪ್ರಭಾವ ಬೀರಬಹುದು ಎಂದು ಭಾವಿಸಿದ್ದೇನೆ’ ಎಂದು ಅವರು ಹೇಳಿದರು.

‘ರಷ್ಯಾ– ಉಕ್ರೇನ್ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ. ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂಬುದಾಗಿ ಭಾರತ ಭಾವಿಸುತ್ತದೆ’ ಎಂದು ಜರ್ಮನಿಯಲ್ಲಿ ಸೋಮವಾರ ಮೋದಿ ಹೇಳಿದ್ದರು.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದ ಮೋದಿ, ಯುದ್ಧವನ್ನು ಸ್ಥಗಿತಗೊಳಿಸುವಂತೆ ಉಕ್ರೇನ್ ಬಿಕ್ಕಟ್ಟಿನ ಆರಂಭದಲ್ಲೇ ಭಾರತ ಹೇಳಿತ್ತು. ವಿವಾದ ಪರಿಹಾರಕ್ಕೆ ಮಾತುಕತೆಯೊಂದೇ ಪರಿಹಾರ ಎಂದು ಹೇಳಿತ್ತು ಎಂಬುದಾಗಿ ನೆನಪಿಸಿಕೊಂಡಿದ್ದರು.

ಹೂಡಿಕೆ ಮಾಡದವರು ಅವಕಾಶ ಕಳೆದುಕೊಳ್ಳುತ್ತಾರೆ: ಮೋದಿ

ಭಾರತದಲ್ಲಿ ಹೂಡಿಕೆ ಮಾಡದವರು ಖಂಡಿತವಾಗಿಯೂ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ‘ಎಫ್‌ಒಎಂಒ’ ಅಥವಾ ‘ಕಳೆದುಕೊಳ್ಳುವ ಭಯ’ ಪದವನ್ನು ಪ್ರಧಾನಿ ಈ ವೇಳೆ ಬಳಸಿದ್ದಾರೆ.

ಭಾರತ– ಡೆನ್ಮಾರ್ಕ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳು ಹಸಿರು ತಂತ್ರಜ್ಞಾನ, ಶೀತಲ ಸರಪಳಿಗಳು, ಹಡಗು ಮತ್ತು ಬಂದರುಗಳಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಸೃಷ್ಟಿಸಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.