ADVERTISEMENT

7.8 ತೀವ್ರತೆಯ ಪ್ರಬಲ ಭೂಕಂಪ: ಟರ್ಕಿ, ಸಿರಿಯಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2023, 9:39 IST
Last Updated 6 ಫೆಬ್ರುವರಿ 2023, 9:39 IST
ರಕ್ಷಣಾ ಕಾರ್ಯಾಚರಣೆಯ ಚಿತ್ರ
ರಕ್ಷಣಾ ಕಾರ್ಯಾಚರಣೆಯ ಚಿತ್ರ   

ಅಂಕಾರ (ಟರ್ಕಿ): ಟರ್ಕಿ ಹಾಗೂ ಸಿರಿಯಾ ದೇಶಗಳ ಗಡಿ ಭಾಗದಲ್ಲಿ ಸೋಮವಾರ ಮುಂಜಾನೆ ಸಂಭವಿಸಿರುವ 7.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಸಾವಿನ ಸಂಖ್ಯೆ 284ಕ್ಕೆ ಏರಿಕೆಯಾಗಿದೆ ಎಂದು ಟರ್ಕಿ ಉಪಾಧ್ಯಕ್ಷ ಫೌತ್ ಒಕ್ಟೆಯ್ ತಿಳಿಸಿದ್ದಾರೆ. ಇತ್ತ ಅಲೆಪ್ಪೊ, ಹಮಾ, ಟರ್ಟಸ್ ಹಾಗೂ ಲಕಾಟಿಯಾ ಪ್ರದೇಶಗಳಲ್ಲಿ ಈವರೆಗೆ 237 ಜನರು ಮೃತಪಟ್ಟಿರುವುದು ವರದಿಯಾಗಿದೆ ಎಂದು ಸಿರಿಯಾ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಟರ್ಕಿಯಲ್ಲಿ 2,323 ಮಂದಿ ಹಾಗೂ ಸಿರಿಯಾದಲ್ಲಿ 639 ಜನರು ಗಾಯಗೊಂಡಿದ್ದಾರೆ.

ADVERTISEMENT

ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಹಾಗೂ 17.9 ಕಿ.ಮೀ. ಆಳದಲ್ಲಿ ಮುಂಜಾನೆ 4.17ರ ಹೊತ್ತಿಗೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ದೇಶ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್‌, ಸೈಪ್ರಸ್‌ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿದೆ.

ಟರ್ಕಿಯ ಆಂತರಿಕ ಇಲಾಖೆ ಸಚಿವ ಸುಲೇಮನ್‌ ಸೋಯ್ಲು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಗಾಜಿಯಾಂಟೆಪ್‌, ಕಹ್ರಾಮನ್ಮಾರಸ್‌, ಹಟಾಯ್‌, ಒಸ್ಮಾನಿಯಾ, ಅದಿಯಾಮನ್‌, ಮಲತ್ಯ, ಸನ್ಲಿಯುರ್ಫಾ, ಅದಾನ, ದಿಯಾರ್ಬಕಿರ್ ಹಾಗೂ ಕಿಲಿಸ್‌ನಲ್ಲಿ ಅಪಾರ ಹಾನಿಯಾಗಿವೆ ಎಂದು ತಿಳಿಸಿದ್ದಾರೆ.

ಸಿರಿಯಾ ಆರೋಗ್ಯ ಇಲಾಖೆಯ ಉಪ ಸಚಿವ ಅಹಮದ್ ದಮಿರಿಯೆಹ್‌, ಭೂಕಂಪದಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಪ್ರಧಾನ ತುರ್ತು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪ್ರತಿ ಗಾಯಾಳುವಿಗೂ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರವನ್ನು ಅಮೆರಿಕದ ಭೂವಿಜ್ಞಾನ ಸಂಸ್ಥೆ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.