ADVERTISEMENT

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್‌ನ ಸಮಾಧಿ ಸ್ಥಳ 9 ವರ್ಷಗಳ ಬಳಿಕ ಬಹಿರಂಗ ‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 10:57 IST
Last Updated 7 ನವೆಂಬರ್ 2022, 10:57 IST
   

ಕಾಬೂಲ್‌: ಸಂಸ್ಥಾಪಕ ಮುಲ್ಲಾ ಓಮರ್‌ನ ಸಮಾಧಿ ಸ್ಥಳವನ್ನು ತಾಲಿಬಾನ್‌ ಸುಮಾರು 9 ವರ್ಷಗಳ ಬಳಿಕ ಬಹಿರಂಗಪಡಿಸಿದೆ.

2013ರಲ್ಲಿ ಮೃತನಾಗಿದ್ದ ಮುಲ್ಲಾ ಓಮರ್‌ನ ಸಮಾಧಿ ಸ್ಥಳವನ್ನು ಈವರೆಗೂ ತಾಲಿಬಾನ್‌ ಗೌಪ್ಯವಾಗಿ ಇರಿಸಿತ್ತು.

ಝಬುಲ್‌ ಪ್ರಾಂತ್ಯದ ಸೂರಿ ಜಿಲ್ಲೆಯಲ್ಲಿರುವ ಒಮರಾಝೋದಲ್ಲಿ ಮುಲ್ಲಾ ಓಮರ್‌ನ ಸಮಾಧಿ ಇದ್ದು, ಭಾನುವಾರ ಬೆಳಿಗ್ಗೆ ತಾಲಿಬಾನ್‌ ನಾಯಕರು ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ತಾಲಿಬಾನ್‌ ವಕ್ತಾರ ಝಬಿಯುಲ್ಲಾ ಮುಜಾಹಿದ್‌ ಹೇಳಿದ್ದಾರೆ.

ADVERTISEMENT

‘ನಮ್ಮ ಸುತ್ತಮುತ್ತ ಹಲವು ಶತ್ರುಗಳು ಇದ್ದಿದ್ದರಿಂದ ಹಾಗೂ ದೇಶವನ್ನು ವಿರೋಧಿಗಳು ಆಕ್ರಮಿಸಿಕೊಂಡಿದ್ದರಿಂದ ನಾ‌ವು ಈವರೆಗೆ ಸಮಾಧಿ ಸ್ಥಳವನ್ನು ಗೌಪ್ಯವಾಗಿಟ್ಟಿದ್ದೆವು. ಅವರ ನಿಕಟ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮಾತ್ರ ಸಮಾಧಿ ಸ್ಥಳದ ಬಗ್ಗೆ ಮಾಹಿತಿ ಇತ್ತು‘ ಎಂದು ಮುಜಾಹಿದ್ ಹೇಳಿದ್ದಾರೆ.

ಅಲ್ಲದೇ ‘ಈಗ ಜನ ಸಮಾಧಿ ಸಂದರ್ಶನಕ್ಕೆ ತೆರಳಬಹುದಾಗಿದೆ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ‘ ಎಂದು ‌ಅವರು ಹೇಳಿದ್ದಾರೆ.

ಸಮಾಧಿಯ ಚಿತ್ರವನ್ನು ತಾಲಿಬಾನ್‌ ಅಧಿಕಾರಿಗಳು ಹಂಚಿಕೊಂಡಿದ್ದು, ಬಿಳಿ ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿರುವ ಸಮಾಧಿಗೆ, ಹಸಿರು ಲೋಹದ ಪ‍ಂಜರವನ್ನು ‌ಅಳವಡಿಸಲಾಗಿದೆ.

2001ರಲ್ಲಿ ತಾಲಿಬಾನಿಗಳು ಅಧಿಕಾರ ಕಳೆದುಕೊಂಡ ಬಳಿಕ ಮುಲ್ಲಾ ಓಮರ್‌ನ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬಂದಿದ್ದವು. 2015ರಲ್ಲಿ ಮುಲ್ಲಾ ಓಮರ್‌ 2 ವರ್ಷಗಳ ಹಿಂದೆಯೇ ಮೃತನಾಗಿದ್ದಾನೆ ಎಂದು ತಾಲಿಬಾನ್‌ ಹೇಳಿತ್ತು.

1993ರಲ್ಲಿ ಮುಲ್ಲಾ ಓಮರ್ ತಾಲಿ‌ಬಾನ್‌ ಸಂಘಟನೆಯನ್ನು ಹುಟ್ಟು ಹಾಕಿದ್ದ. ಆ ವೇಳೆ ಆತನಿಗೆ 55 ವರ್ಷ ವಯಸ್ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.