ADVERTISEMENT

26/11ರ ಮುಂಬೈ ದಾಳಿ: ಉಗ್ರ ರಾಣಾ ಗಡೀಪಾರಿಗೆ ಅಮೆರಿಕ ಸುಪ್ರೀಂ ಕೋರ್ಟ್ ಅಸ್ತು

ಭಾರತದ ರಾಜತಾಂತ್ರಿಕ ಹೋರಾಟಕ್ಕೆ ಸಿಕ್ಕ ಜಯ

ಏಜೆನ್ಸೀಸ್
Published 25 ಜನವರಿ 2025, 5:37 IST
Last Updated 25 ಜನವರಿ 2025, 5:37 IST
<div class="paragraphs"><p>ತಹವ್ವುರ್ ಹುಸೇನ್ ರಾಣಾ</p></div>

ತಹವ್ವುರ್ ಹುಸೇನ್ ರಾಣಾ

   

ವಾಷಿಂಗ್ಟನ್‌/ ಮುಂಬೈ: 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಡಾ.ತಹವ್ವುರ್‌ ರಾಣಾ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. 

ಇದರಿಂದ, ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಇದ್ದ ಅಡೆತಡೆ ನಿವಾರಣೆ ಆದಂತಾಗಿದೆ. ಇದು, ಭಾರತದ ರಾಜತಾಂತ್ರಿಕ ಹೋರಾಟಕ್ಕೆ ದೊರೆತ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ, 166 ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರವಾಗು‌ವುದನ್ನು ತಪ್ಪಿಸಲು ಸುದೀರ್ಘ ಅವಧಿಯಿಂದ ಕಾನೂನು ಹೋರಾಟ ನಡೆಸುತ್ತಿದ್ದ ರಾಣಾ ಮುಂದಿದ್ದ ಕೊನೆಯ ಅವಕಾಶ ಇದಾಗಿತ್ತು.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸ್ವೀಕರಿಸಿದ ಮರು ದಿನ ಅಂದರೆ, ಜ.21ರಂದು ಸುಪ್ರೀಂ ಕೋರ್ಟ್‌ನಿಂದ ಈ ಆದೇಶ ಹೊರಬಿದ್ದಿದೆ. ‘ರಾಣಾ ಮನವಿಯನ್ನು ನಿರಾಕರಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಈ ಹಿಂದೆ ರಾಣಾ, ಸ್ಯಾನ್‌ಫ್ರಾನ್ಸಿಸ್ಕೊದ ನಾರ್ತ್ ಸರ್ಕ್ಯೂಟ್‌ ಮೇಲ್ಮನವಿ ನ್ಯಾಯಾಲಯ ಸೇರಿದಂತೆ ಹಲವು ಫೆಡರಲ್‌ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸಿ, ವಿಫಲರಾಗಿದ್ದ. ಕೆಳ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸಲು ಕೋರಿ ಆತ ಕಳೆದ ನವೆಂಬರ್‌ 13ರಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ. ರಾಣಾನನ್ನು, ಪ್ರಸ್ತುತ ಲಾಸ್‌ ಏಂಜಲೀಸ್‌ನ ಮೆಟ್ರೊಪಾಲಿಟನ್‌ ಜೈಲಿನಲ್ಲಿರಿಸಲಾಗಿದೆ.

26/11ರ ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಪಾಕಿಸ್ತಾನ ಮೂಲದ ಅಮೆರಿಕದ ಭಯೋತ್ಪಾದಕ ಡೇವಿಡ್‌ ಹೆಡ್ಲಿ ಜತೆ ರಾಣಾಗೆ ನಂಟಿದೆ ಎನ್ನಲಾಗಿದೆ.

ಇದಕ್ಕೂ ಮುನ್ನಾ, ರಾಣಾ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಅಮೆರಿಕ ಸರ್ಕಾರವು ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ಅಮೆರಿಕದ ಸಾಲಿಸಿಟರ್‌ ಜನರಲ್‌ ಎಲಿಜಬೆತ್ ಬಿ. ಪ್ರಿಲಾಗರ್‌ ಅವರು ಡಿಸೆಂಬರ್‌ 16ರಂದು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ದಾಖಲಿಸಿದ್ದರು.

ಈ ಪ್ರಕರಣದಲ್ಲಿ, ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅರ್ಹತೆ ರಾಣಾಗೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದರು.

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮೆರಿಕದ ಆರು ಪ್ರಜೆಗಳು ಸೇರಿದಂತೆ 166 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮುಂಬೈನ ಪ್ರಮುಖ ಸ್ಥಳಗಳ ಮೇಲೆ ಪಾಕಿಸ್ತಾನದ 10 ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿ ವೇಳೆ ಸೆರೆ ಸಿಕ್ಕೆ ಏಕೈಕ ಭಯೋತ್ಪಾದಕ ಮೊಹಮ್ಮದ್‌ ಅಜ್ಮಲ್‌ ಕಸಬ್‌ನನ್ನು 2012ರ ನವೆಂಬರ್‌ 21ರಂದು ಗಲ್ಲಿಗೇರಿಸಲಾಯಿತು.

ಉಜ್ವಲ್‌ ನಿಕಮ್‌ ಸ್ವಾಗತ 

ವಿಶೇಷ ನ್ಯಾಯಾಲಯದಲ್ಲಿ ಮುಂಬೈ ಪೊಲೀಸರನ್ನು ಪ್ರತಿನಿಧಿಸಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಮ್‌ ಅವರು ಅಮೆರಿಕದ ಸುಪ್ರೀಂ ಕೋರ್ಟ್‌ ರಾಣಾ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ತಿರಸ್ಕರಿಸಿದ್ದನ್ನು ಸ್ವಾಗತಿಸಿದ್ದಾರೆ.

‘ರಾಣಾ ಹಸ್ತಾಂತರವಾದ ಬಳಿಕ ಮುಂಬೈ ದಾಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಪಡೆಯಲು ಭಾರತಕ್ಕೆ ಸಾಧ್ಯವಾಗುತ್ತದೆ. ಪಾಕಿಸ್ತಾನಿಯರ ಪಾತ್ರದ ಕುರಿತು ಇನ್ನಷ್ಟು ವಿವರಗಳು ಲಭ್ಯವಾಗುತ್ತವೆ’ ಎಂದಿದ್ದಾರೆ.

‘ಹೆಡ್ಲಿ ಕೆಲವು ಸಾಕ್ಷ್ಯ ಮತ್ತು ಪುರಾವೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾನೆ. ಲಷ್ಕರ್‌–ಎ–ತಯಬಾ ಮತ್ತು ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳ ಜತೆಗಿನ ಸಂಪರ್ಕವನ್ನು ತೋರಿಸುವ ಇ–ಮೇಲ್‌ ವಿವರಗಳನ್ನು ಸಲ್ಲಿಸಿದ್ದಾನೆ. ಹೀಗಾಗಿ ರಾಣಾ ಹಸ್ತಾಂತರದಿಂದ ಮುಂಬೈ ದಾಳಿಯಲ್ಲಿ ಪಾಕಿಸ್ತಾನಿಯರ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯುತ್ತದೆ ಎಂಬ ವಿಶ್ವಾಸವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಹೆಡ್ಲಿ ಜತೆಗಿನ ರಾಣಾ ನಂಟು 

ದಶಕದ ಹಿಂದೆ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ಡೇವಿಡ್‌  ಹೆಡ್ಲಿ ಅಲಿಯಾಸ್ ದಾವೂದ್‌ ಗಿಲಾನಿ 2008ರ ಮುಂಬೈ ದಾಳಿಗೆ (ನವೆಂಬರ್‌ 26–29) ಸಂಬಂಧಿಸಿದ ಮಹತ್ವದ ಸಾಕ್ಷ್ಯವನ್ನು ಒದಗಿಸಿದ್ದ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಹಸನ್‌ ಅಬ್ದಲ್‌ ಕೆಡೆಟ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ರಾಣಾ ಮತ್ತು ಹೆಡ್ಲಿ ಬ್ಯಾಚ್‌ಮೇಟ್‌ ಆಗಿದ್ದರು. ‘2006ರ ಆರಂಭದಲ್ಲಿ ಹೆಡ್ಲಿ ಮತ್ತು ಲಷ್ಕರ್‌ನ ಇಬ್ಬರು ಸದಸ್ಯರು ಮುಂಬೈನಲ್ಲಿ ವಲಸೆ ಕಚೇರಿ ತೆರೆಯುವ ಕುರಿತು ಚರ್ಚಿಸಿದ್ದರು. ಈ ಕಚೇರಿ ಹೆಸರಲ್ಲಿ ತಮ್ಮ ಕಣ್ಗಾವಲು ಚಟುವಟಿಕೆಗಳ ನಡೆಸುವ ಉದ್ದೇಶವನ್ನು ಅವರು ಹೊಂದಿದ್ದರು.  26/11ರ ದಾಳಿಗೂ ಮುನ್ನ ಹೆಡ್ಲಿ 2007 ಮತ್ತು 2008ರ ನಡುವೆ ಭಾರತದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದ. ಈ ಪ್ರವಾಸಕ್ಕೆ ಅವರಿಗೆ ರಾಣಾ ಸಹಾಯ ಮಾಡಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

2006ರ ಸೆಪ್ಟೆಂಬರ್ 2007ರ ಫೆಬ್ರುವರಿ ಸೆಪ್ಟೆಂಬರ್‌ 2008ರ ಏಪ್ರಿಲ್‌ ಮತ್ತು ಜುಲೈನಲ್ಲಿ ಹೆಡ್ಲಿ ಮುಂಬೈಗೆ ಪ್ರವಾಸ ಕೈಗೊಂಡಿದ್ದ. ಈ ವೇಳೆ ದಾಳಿ ನಡೆಸಬಹುದಾದ ವಿವಿಧ ಸಂಭಾವ್ಯ ಸ್ಥಳಗಳ ವಿಡಿಯೊ ಸಿದ್ಧಪಡಿಸಿದ್ದ. ಪ್ರತಿ ಪ್ರವಾಸದ ಬಳಿಕ ಹೆಡ್ಲಿ ವಿಡಿಯೊಗಳನ್ನು ಒದಗಿಸಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಎಂದು ಇವೇ ಮೂಲಗಳು ತಿಳಿಸಿವೆ.

‘ಭಾರತದಲ್ಲಿ ಹೊಸದಾಗಿ ಪ್ರಕರಣ’

‘ಅಮೆರಿಕದಿಂದ ರಾಣಾನನ್ನು ಗಡೀಪಾರು ಮಾಡುವುದರೊಂದಿಗೆ ರಾಣಾ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಭಾರತದ ಅಧಿಕಾರಿಗಳು ಅಮೆರಿಕಕ್ಕೆ ತೆರಳಿ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಭಾರತಕ್ಕೆ ಕರೆತಂದ ನಂತರ ಆತನ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಿ ಆರೋಪಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ’ ಎಂದು ಬಾಂಬೆ ಹೈಕೋರ್ಟ್‌ ವಕೀಲ ಅನಿಕೇತ್ ನಿಕಮ್ ಹೇಳುತ್ತಾರೆ. 

ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದ ನಂತರ ಆತನನ್ನು ವಿಚಾರಣೆಗೆ ಒಳಪಡಿಸುವುದರಿಂದ ದಾಳಿ ಕುರಿತಂತೆ ಮತ್ತಷ್ಟು ವಿವರಗಳು ಲಭ್ಯವಾಗಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ಮುಂಬೈ ಮೇಲಿನ ಭಯೋತ್ಪಾದಕ ದಾಳಿಗೆ ಸಂಬಂಧ ಇದ್ದರು ಅಥವಾ ಇಲ್ಲದಿದ್ದರೂ ಕೂಡ ರಾಣಾ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಹೊಸದಾಗಿ ಏನಾದರೂ ಸುಳಿವು ಸಿಕ್ಕಲ್ಲಿ ಮತ್ತೆ ತನಿಖೆ ಆರಂಭಿಸಲಾಗುತ್ತದೆ. ಈ ಹಿಂದೆ ಯಾರಾದರೂ ತನಿಖೆಯಿಂದ ತಪ್ಪಿಸಿಕೊಂಡಿದ್ದಲ್ಲಿ ಅವರು ಹೊಸದಾಗಿ ತನಿಖೆ ಎದುರಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ತಹವ್ವುರ್‌ ರಾಣಾ ಹಸ್ತಾಂತರಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿರುವುದು ಭಾರತ ಸರ್ಕಾರ ಮತ್ತು ಭದ್ರತಾ ಏಜೆನ್ಸಿಗಳಿಗೆ ದೊರೆತ ದೊಡ್ಡ ಜಯ.
-ಉಜ್ವಲ್‌ ನಿಕಮ್‌, ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.