ADVERTISEMENT

ಪಾಕ್‌ನಲ್ಲಿ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್‌ ಬಂಧನ

ಏಜೆನ್ಸೀಸ್
Published 17 ಜುಲೈ 2019, 8:23 IST
Last Updated 17 ಜುಲೈ 2019, 8:23 IST
   

ನವದೆಹಲಿ: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನವು ಬುಧವಾರ ಬಂಧಿಸಿ ಜೈಲಿಗೆ ಕಳಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳನ್ನು ಉಲ್ಲೇಖಿಸಿಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಯೀದ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಚಾರಣೆ ನಡೆಸಲಾಗುವುದು ಎನ್ನುವ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳ ಹೇಳಿಕೆಯನ್ನೂ ಅಲ್ಲಿನ ಮಾಧ್ಯಮಗಳು ಉಲ್ಲೇಖಿಸಿವೆ.

ಲಷ್ಕರ್‌ ಎ ತಯ್ಯಬಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದಲ್ಲಿ 23 ಪ್ರಕರಣಗಳು ದಾಖಲಾಗಿವೆ. ಹಫೀಜ್ ಸಯೀದ್‌ ಓರ್ವ ಭಯೋತ್ಪಾದಕ ಎಂದು ಭಾರತ ಪದೇಪದೆ ಹೇಳುತ್ತಿದ್ದರೂ ಪಾಕ್‌ನಲ್ಲಿ ಅವನಿಗೆ ಮುಕ್ತವಾಗಿ ಓಡಾಡಲು ಮತ್ತು ಭಾರತ ವಿರೋಧ ರ್‍ಯಾಲಿಗಳನ್ನು ನಡೆಸಲು ಅವಕಾಶ ಮಾಡಿಕೊಡಲಾಗಿತ್ತು.

ADVERTISEMENT

ಈ ತಿಂಗಳ ಆರಂಭದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದಪಾಕಿಸ್ತಾನವು ಹಫೀಜ್ ಸಯೀದ್‌ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿ ತನಿಖೆ ಆರಂಭಿಸಿತ್ತು. ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸುವುದು ಸೇರಿದಂತೆ ಹಲವು ಆರೋಪಗಳನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ದಳವುಹಫೀಜ್ ವಿರುದ್ಧ ದಾಖಲಿಸಿದ್ದಎಫ್‌ಐಆರ್‌ನಲ್ಲಿ ನಮೂದಿಸಿತ್ತು.

2017ರಲ್ಲಿ ಹಫೀಜ್ ಸಯೀದ್ ಮತ್ತು ಅವನ ನಾಲ್ವರು ಸಹಚರರನ್ನು ಪಾಕಿಸ್ತಾನ ಸರ್ಕಾರವು ಭಯೋತ್ಪಾದನಾ ನಿಗ್ರಹ ಕಾನೂನುಗಳ ಅನ್ವಯ ಬಂಧಿಸಿ, ಜೈಲಿನಲ್ಲಿ ಇರಿಸಿತ್ತು. 11 ತಿಂಗಳ ನಂತರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವನ್ಯಾಯಿಕ ಪರಾಮರ್ಶೆ ಮಂಡಳಿಯು ಬಂಧನದ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದ ಕಾರಣ ಸಯೀದ್ ಬಿಡುಗಡೆಯಾಗಿದ್ದ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸುವುದನ್ನು ತಡೆಗಟ್ಟಲು ಶ್ರಮಿಸುತ್ತಿರುವಪ್ಯಾರೀಸ್ ಮೂಲದ ಜಾಗತಿಕ ಸಂಸ್ಥೆ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್’ ಪಾಕಿಸ್ತಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನಾ ಚಟುವಟಿಕೆಗೆ ಹಣ ಒದಗಿಸುವುದನ್ನು ತಡೆಯಲು ಪಾಕಿಸ್ತಾನದ ಕಾನೂನುಗಳು ಸಮರ್ಪಕವಾಗಿ ಇಲ್ಲ ಎಂಬುದು ಸಂಸ್ಥೆಯ ಆಕ್ಷೇಪವಾಗಿತ್ತು. ಭಯೋತ್ಪಾದನಾ ಚಟುವಟಿಕೆಗೆ ಹಣ ಒದಗಿಸುವುದನ್ನು ನಿಲ್ಲಿಸಲು ಬಿಗಿಯಾದ ಕಾರ್ಯಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಎದುರಿಸಲು ಸಿದ್ಧವಾಗಬೇಕು ಎಂದು ಪಾಕ್ ಸರ್ಕಾರಕ್ಕೆ ಎಚ್ಚರಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.