ADVERTISEMENT

ಸ್ವೀಡನ್‌ನಲ್ಲಿ ಕುರಾನ್‌ಗೆ ಅವಮಾನ: ಮುಸ್ಲಿಂ ರಾಷ್ಟ್ರಗಳ ಆಕ್ರೋಶ

ಎಪಿ ಚಿತ್ರ
Published 21 ಜುಲೈ 2023, 16:24 IST
Last Updated 21 ಜುಲೈ 2023, 16:24 IST
ಕುರಾನ್‌ಗೆ ಅವಮಾನ: ಪ್ರತಿಭಟನೆ ತೀವ್ರ
ಕುರಾನ್‌ಗೆ ಅವಮಾನ: ಪ್ರತಿಭಟನೆ ತೀವ್ರ   

ಬಾಗ್ದಾದ್ (ಎಪಿ): ಸ್ವೀಡನ್‌ನಲ್ಲಿರುವ ಇರಾಕ್ ರಾಯಭಾರ ಕಚೇರಿ ಹೊರಗೆ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ ಅನ್ನು ಅಪಮಾನಗೊಳಿಸಿರುವುದನ್ನು ಖಂಡಿಸಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಬಳಿಕ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಇರಾಕ್, ಲೆಬನಾನ್ ಮತ್ತು ಇರಾನ್‌ಗಳಲ್ಲಿ ಪ್ರಾರ್ಥನೆಯ ಬಳಿಕ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ, ಬಾಗ್ದಾದ್‌ನಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಸ್ವೀಡನ್‌ ರಾಯಭಾರ ಕಚೇರಿಯನ್ನು ಕೆಲಕಾಲ ವಶಪಡಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲವರು ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಅಗ್ನಿಶಾಮಕ ಪಡೆಯಿಂದ ಕೂಡಲೇ ಅದನ್ನು ನಂದಿಸಲಾಯಿತು.

ಪ್ರತಿಭಟನಕಾರರ ದಾಳಿಗೂ ಮುನ್ನವೇ ಸ್ವೀಡನ್ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಸ್ವೀಡನ್‌ನ ನ್ಯೂಸ್ ಏಜೆನ್ಸಿ ‘ಟಿಟಿ’ ಮಾಹಿತಿ ನೀಡಿದೆ. 

ADVERTISEMENT

ಇರಾಕ್ ಮೂಲದ ಕ್ರಿಶ್ಚಿಯನ್ ಸಲ್ವಾನ್ ಮೊಮಿಕ ಎಂಬಾತ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿರುವ ಇರಾಕ್ ರಾಯಭಾರ ಕಚೇರಿ ಎದುರು ಕುರಾನ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದ. ಇದಕ್ಕೆ ಸ್ವೀಡನ್ ಪೊಲೀಸರು ಅನುಮತಿ ನೀಡಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಇರಾನ್, ಇರಾಕ್ ಮತ್ತು ಲೆಬನಾನ್ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಶುಕ್ರವಾರ ಪ್ರತಿಭಟನೆ ನಡೆಸಿವೆ.

ಇರಾಕ್‌ನ ಪ್ರಧಾನಿ ಶಿಯಾ ಅಲ್–ಸುದಾನಿ ಅವರು ಇರಾಕ್‌ನಲ್ಲಿರುವ ಸ್ವೀಡನ್ ರಾಯಭಾರಿ ಹಾಗೂ ಸ್ವೀಡನ್‌ನಲ್ಲಿರುವ ಇರಾಕ್‌ನ ರಾಯಭಾರ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಆದೇಶಿಸಿದ್ದಾರೆ. ಇನ್ನು ನೆರೆಯ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರಾ ಅಬ್ದುಲ್ಲಾ ಹಿನ್ ಅವರು, ಈ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಸ್ವೀಡನ್‌ನ ರಾಯಭಾರಿಗೆ ಸಮನ್ಸ್ ನೀಡಿದ್ದಾರೆ. ‍ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.