ADVERTISEMENT

ಅಫೀಮು ಬೆಳೆಯುವ ಅತಿದೊಡ್ಡ ದೇಶ ಮ್ಯಾನ್ಮಾರ್: ವಿಶ್ವಸಂಸ್ಥೆ ವರದಿ

ರಾಯಿಟರ್ಸ್
Published 12 ಡಿಸೆಂಬರ್ 2023, 4:51 IST
Last Updated 12 ಡಿಸೆಂಬರ್ 2023, 4:51 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ಬ್ಯಾಂಕಾಕ್‌: ಅಫೀಮು ಬೆಳೆಯುವ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿ ಮ್ಯಾನ್ಮಾರ್‌ ಗುರುತಿಸಿಕೊಂಡಿದೆ ಎಂದು ವಿಶ್ವ ಸಂಸ್ಥೆಯ ವರದಿ ಮಂಗಳವಾರ ತಿಳಿಸಿದೆ.

ಅಫ್ಗಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರ 2022ರಲ್ಲಿ ಅಫೀಮು ಕೃಷಿ ಮೇಲೆ ನಿಷೇಧ ಹೇರಿದ ಬಳಿಕ, ಶೇ 95 ರಷ್ಟು ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ, ಜಾಗತಿಕ ಅಫೀಮು ಸರಬರಾಜು ಅಫ್ಗಾನಿಸ್ತಾನದಿಂದ ಮ್ಯಾನ್ಮಾರ್‌ಗೆ ಸ್ಥಳಾಂತರಗೊಂಡಿದೆ. ಮ್ಯಾನ್ಮಾರ್‌ನಲ್ಲಿ 2021ರ ನಂತರ ತಲೆದೋರಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆಯು ಅಲ್ಲಿನ ಜನರನ್ನು ಅಫೀಮು ಕೃಷಿಗೆ ಪ್ರೇರೇಪಿಸಿದೆ ಎಂದು ವಿಶ್ವಸಂಸ್ಥೆಯ ಡ್ರಗ್ಸ್ ಮತ್ತು ಅಪರಾಧ ಕಚೇರಿ (ಯುಎನ್ಒಡಿಸಿ) ವರದಿ ಹೇಳಿದೆ.

ಮ್ಯಾನ್ಮಾರ್‌ ರೈತರು ಶೇ 75ಕ್ಕೂ ಹೆಚ್ಚಿನ ಆದಾಯವನ್ನು ಅಫೀಮು ಬೆಳೆಯುವುದರಿಂದ ಗಳಿಸುತ್ತಿದ್ದಾರೆ. ಇದರ ಹೂವಿನ ಬೆಲೆ ಕೆ.ಜಿ.ಗೆ ಸರಾಸರಿ ₹ 29,594 ಇದ್ದು, ಈ ಬೆಳೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಶೇ 18ರಷ್ಟು ವಿಸ್ತಾರಗೊಳ್ಳುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ADVERTISEMENT

'ಸೇನೆಯು 2021ರಲ್ಲಿ ಆಡಳಿತವನ್ನು ವಶಕ್ಕೆ ಪಡೆದ ಬಳಿಕ ಉಂಟಾಗುತ್ತಿರುವ ಅಡಚಣೆಗಳಿಂದಾಗಿ, ರಿಮೋಟ್‌ ಪ್ರದೇಶಗಳ ರೈತರು ಜೀವನೋಪಾಯಕ್ಕಾಗಿ ಅಫೀಮು ಬೆಳೆಯವುದರಲ್ಲಿ ತೊಡಗಿಕೊಂಡಿದ್ದಾರೆ' ಎಂದು  ಯುಎನ್ಒಡಿಸಿ ಪ್ರಾದೇಶಿಕ ಪ್ರತಿನಿಧಿ ಜೆರೆಮಿ ಡೌಗ್ಲಾಸ್‌ ಹೇಳಿದ್ದಾರೆ.

ಉತ್ತರದ ರಾಜ್ಯಗಳಾದ ಶಾನ್‌, ಚಿನ್‌ ಮತ್ತು ಕಚಿನ್‌ನಲ್ಲಿರುವ ಮ್ಯಾನ್ಮಾರ್‌ನ ಗಡಿ ಪ್ರದೇಶಗಳಲ್ಲಿ ಅಫೀಮು ಕೃಷಿ ಪ್ರದೇಶ ಭಾರಿ ಪ್ರಮಾಣದಲ್ಲಿ ವಿಸ್ತರಿಸಲ್ಪಟ್ಟಿವೆ. ಅತ್ಯಾಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡಿರುವುದರಿಂದ ಇಳುವರಿಯು ಪ್ರತಿ ಹೆಕ್ಟೆರ್‌ಗೆ ಶೇ 16ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಫೀಮು ಕೃಷಿ ವಿಸ್ತರಣೆಯು ಮ್ಯಾನ್ಮಾರ್‌ನಲ್ಲಿ ಸಿಂಥೆಟಿಕ್‌ ಡ್ರಗ್‌ ಉತ್ಪಾದನೆ ಹಾಗೂ ಕಳ್ಳಸಾಗಣೆ, ಹಣ ಅಕ್ರಮ ವರ್ಗಾವಣೆ, ಇತರ ಸಂಘಟಿತ ಅಪರಾಧ ಕೃತ್ಯಗಳೂ ಸೇರಿದಂತೆ ಅಕ್ರಮ ಆರ್ಥಿಕತೆಗೆ ಕಾರಣವಾಗಿದೆ ಎನ್ನಲಾಗಿದೆ.

ಈ ವರದಿಗೆ ಸಂಬಂಧಿಸಿದಂತೆ ಮ್ಯಾನ್ಮಾರ್‌ನ ಸೇನಾ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.