
ಬ್ಯಾಂಕಾಕ್ : ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಬೆಂಬಲಿತ ರಾಜಕೀಯ ಪಕ್ಷವಾದ ಯೂನಿಯನ್ ಸಾಲಿಡಾರಿಟಿ ಆ್ಯಂಡ್ ಡೆವಲಪ್‌ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಗೆಲುವು ಸಾಧಿಸಿದೆ.
ಹೊಸ ಸರ್ಕಾರವನ್ನು ಔಪಚಾರಿಕವಾಗಿ ಮುನ್ನಡೆಸದೆ, ಆಡಳಿತದಲ್ಲಿ ಸೇನೆಯ ಪ್ರಭಾವವನ್ನು ಉಳಿಸಿಕೊಳ್ಳಲು ಸಲಹಾ ಮಂಡಳಿ ರಚನೆಗೆ ಅಧಿಕಾರ ನೀಡುವ ಕಾನೂನಿಗೆ ಸೇನಾ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲೇಯಿಂಗ್ ಬುಧವಾರ ಸಹಿ ಹಾಕಿದ್ದಾರೆ.
ಹೊಸ ಸಂಸತ್ತು ಅಧಿವೇಶನ ನಡೆದಾಗ ಮಿಲಿಟರಿ ಸರ್ಕಾರದ ಮುಖ್ಯಸ್ಥರಾದ ಜನರಲ್ ಮಿನ್ ಆಂಗ್ ಹ್ಲೇಯಿಂಗ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಸಲಹಾ ಮಂಡಳಿ ರಚನೆಗೆ ಸಹಿ ಹಾಕಿರುವುದರಿಂದ ಅವರು ಈ ಸ್ಥಾನ ಅಲಂಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಮ್ಯಾನ್ಮಾರ್ ಸಂವಿಧಾನವು ಮಿಲಿಟರಿಗೆ ಶೇ 25ರಷ್ಟು ಸಂಸದೀಯ ಸ್ಥಾನಗಳನ್ನು ಖಾತರಿಪಡಿಸುತ್ತದೆ. ಇದು ಆಡಳಿತದಲ್ಲಿ ಶಸಸ್ತ್ರ ಪಡೆಗಳು ಮತ್ತು ಮಿತ್ರ ಪಕ್ಷಗಳ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಖಚಿತಪಡಿಸುತ್ತದೆ. ಆದರೆ, ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಮತ್ತು ಅಧ್ಯಕ್ಷರಾಗಿ ಏಕಕಾಲದಲ್ಲಿ ಮುಂದುವರಿಯಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಜನರಲ್ ಮಿನ್ ಆಂಗ್ ಹ್ಲೇಯಿಂಗ್ ಯಾವ ಹುದ್ದೆ ತ್ಯಜಿಸುತ್ತಾರೆ ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಕಾರ್ಯಾಂಗ ಅಥವಾ ನ್ಯಾಯಾಂಗದ ಅಧಿಕಾರಕ್ಕೆ ಧಕ್ಕೆ ಆಗದಂತೆ ರಾಷ್ಟ್ರೀಯ ಭದ್ರತೆ, ಅಂತರರಾಷ್ಟ್ರೀಯ ಸಂಬಂಧಗಳು, ಶಾಂತಿ ಮರುಸ್ಥಾಪನೆ, ಕಾನೂನು ಜಾರಿ ವಿಷಯಗಳಲ್ಲಿ ‘ಸಲಹಾ ಮಂಡಳಿಯು ಸರ್ಕಾರಕ್ಕೆ ಸಲಹೆ–ಮಾರ್ಗದರ್ಶನ ನೀಡಲಿದೆ. ಐವರು ಸದಸ್ಯರ ಈ ಮಂಡಳಿಯನ್ನು ಸೇನಾ ಮುಖ್ಯಸ್ಥರು ರಚಿಸುತ್ತಾರೆ.
2021ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರ ವಹಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.