ADVERTISEMENT

Myanmar Earthquake: ಪರಿಹಾರ ಕಾರ್ಯ ಕೈಗೊಳ್ಳುವವರಿಂದ ನೆರವಿಗೆ ಮೊರೆ

ಏಜೆನ್ಸೀಸ್
Published 29 ಮಾರ್ಚ್ 2025, 14:34 IST
Last Updated 29 ಮಾರ್ಚ್ 2025, 14:34 IST
<div class="paragraphs"><p>ಭೂಕಂಪನದಿಂದ ಹಾನಿಗೀಡಾಗಿರುವ ಮ್ಯಾನ್ಮಾರ್‌ಗೆ ನೆರವಿನ ಸಾಮಗ್ರಿಗಳನ್ನು ಒಯ್ಯುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ</p></div>

ಭೂಕಂಪನದಿಂದ ಹಾನಿಗೀಡಾಗಿರುವ ಮ್ಯಾನ್ಮಾರ್‌ಗೆ ನೆರವಿನ ಸಾಮಗ್ರಿಗಳನ್ನು ಒಯ್ಯುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ

   

–ಪಿಟಿಐ ಚಿತ್ರ

ಬ್ಯಾಂಕಾಕ್/ಮಾಂಡಲೆ: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪನದಿಂದಾಗಿ ಕನಿಷ್ಠ 1,644 ಮಂದಿ ಮೃತಪಟ್ಟಿದ್ದಾರೆ. ಭೂಕಂಪನದ ಪರಿಣಾಮಕ್ಕೆ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಿಂದ ನೂರಾರು ಜನರ ಮೃತದೇಹಗಳನ್ನು ಶನಿವಾರ ಹೊರತೆಗೆಯಲಾಗಿದೆ.

ADVERTISEMENT

3,408 ಜನರಿಗೆ ಗಾಯಗಳಾಗಿವೆ, 139 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರ ಹೇಳಿದೆ. ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ.

ಮ್ಯಾನ್ಮಾರ್‌ನಲ್ಲಿ ನಾಗರಿಕ ಕಲಹ ವರ್ಷಗಳಿಂದ ಇದೆ. ಹೀಗಾಗಿ, ದೇಶದ ಎಲ್ಲ ಕಡೆಗಳಿಗೆ ತೆರಳುವುದು ಅಪಾಯಕಾರಿಯಾಗಿದೆ. ಇದು ಪರಿಹಾರ ಕಾರ್ಯ ಕೈಗೊಳ್ಳುವವರಿಗೆ ಸಮಸ್ಯೆ ತಂದೊಡ್ಡಿದೆ. 

ಮ್ಯಾನ್ಮಾರ್‌ನ ರಾಜಧಾನಿ ನೇಪೀಡಾದಲ್ಲಿ ಹಾನಿಗೀಡಾದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಸಾಗಿದೆ. ವಿದ್ಯುತ್‌ ಮತ್ತು ಇಂಟರ್ನೆಟ್ ಸೇವೆಗಳು ನಗರದ ಬಹುತೇಕ ಕಡೆ ಕಡಿತಗೊಂಡಿವೆ. 

ಥಾಯ್ಲೆಂಡ್‌ನಲ್ಲಿ ಹಾನಿ:

ನೆರೆಯ ಥಾಯ್ಲೆಂಡ್‌ನಲ್ಲಿ 1.7 ಕೋಟಿ ಜನರು ವಾಸಿಸುವ ಗ್ರೇಟರ್ ಬ್ಯಾಂಕಾಕ್ ಪ್ರದೇಶ ಸೇರಿ ಹಲವೆಡೆ ಹಾನಿ ಉಂಟಾಗಿದೆ. ಇಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬ್ಯಾಂಕಾಕ್‌ನಲ್ಲಿ 47 ಮಂದಿ ನಾಪತ್ತೆಯಾಗಿದ್ದಾರೆ. ಕುಸಿದುಬಿದ್ದ ಕಟ್ಟಡಗಳ ಅವಶೇಷಗಳನ್ನು ತೆರವು ಮಾಡಲು ಭಾರಿ ಗಾತ್ರದ ಯಂತ್ರಗಳನ್ನು ಶನಿವಾರ ತರಲಾಗಿದೆ. ಆದರೆ, ನಾಪತ್ತೆಯಾಗಿರುವವರು ಬದುಕಿ ಉಳಿದಿರಬಹುದು ಎಂಬ ಆಸೆ ಅವರ ಸಂಬಂಧಿಕರಲ್ಲಿ ಕ್ಷೀಣಿಸಿದೆ.

ನೆರವಿಗೆ ಯಾಚನೆ:

ಮ್ಯಾನ್ಮಾರ್‌ನಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಸಹಾಯ ಯಾಚಿಸುತ್ತಿದ್ದಾರೆ. ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕೆಲಸದಲ್ಲಿ ಅವರು ತೊಡಗಿದ್ದಾರೆ.

ಭೂಕಂಪನದ ನಡುವೆ ಜೀವ ಉಳಿಸಿಕೊಂಡವರು ಹತ್ತಿರದ ಮರಗಳ ಅಡಿಯಲ್ಲಿ ರಾತ್ರಿ ಕಳೆದಿದ್ದಾರೆ. ಕುಸಿದ ಕಟ್ಟಡಗಳ ಆಸುಪಾಸಿನಲ್ಲಿ ರಕ್ಷಣಾ ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಕೂಗುತ್ತಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಯಾರದ್ದಾದರೂ ದನಿ ಕೇಳಿಬರಬಹುದು ಎಂಬುದು ಅವರ ನಿರೀಕ್ಷೆ.

ರಕ್ಷಣಾ ಕಾರ್ಯಗಳು ಆರಂಭಗೊಂಡು ಒಂದು ದಿನ ಕಳೆದಿದೆ. ಈ ಕೆಲಸದಲ್ಲಿ ನಿರತರಾದವರು ದೈಹಿಕವಾಗಿ ಬಳಲಿದ್ದಾರೆ. ‘ನಾವು ನಿನ್ನೆ ರಾತ್ರಿಯಿಂದ ಇಲ್ಲಿದ್ದೇವೆ. ನಾವು ನಿದ್ದೆಯನ್ನೇ ಮಾಡಿಲ್ಲ. ಇಲ್ಲಿ ಇನ್ನಷ್ಟು ನೆರವು ಅಗತ್ಯವಿದೆ’ ಎಂದು ರಕ್ಷಣಾ ಕಾರ್ಯಕರ್ತರೊಬ್ಬರು ಹೇಳಿದರು.

ಮ್ಯಾನ್ಮಾರ್‌ನ ಮಿಲಿಟರಿ ಆಡಳಿತವು ಹಿಂದೆ ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಾಗಲೂ ಅಂತರರಾಷ್ಟ್ರೀಯ ನೆರವು ಪಡೆಯಲು ಒಪ್ಪಿರಲಿಲ್ಲ. ಆದರೆ ಈ ಬಾರಿ ಆಡಳಿತವು ನೆರವು ಬೇಕು ಎಂದು ವಿಶ್ವ ಸಮುದಾಯದ ಎದುರು ಬೇಡಿಕೆ ಮಂಡಿಸಿದೆ. ಇದು ಭೂಕಂಪನದ ತೀವ್ರತೆಯನ್ನು ಹೇಳುತ್ತಿದೆ.

ಅಫ್ಘಾನಿಸ್ತಾನದಲ್ಲಿ ಭೂಕಂಪನ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಶನಿವಾರ ಎರಡು ಬಾರಿ ಭೂಕಂಪನ ಸಂಭವಿಸಿದೆ ಎಂದು ನವದೆಹಲಿಯ ರಾಷ್ಟ್ರೀಯ ಭೂಕಂಪನ ಕೇಂದ್ರ ಹೇಳಿದೆ. ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ನಾಲ್ಕಕ್ಕಿಂತ ಹೆಚ್ಚಿತ್ತು. 4.3ರಷ್ಟು ತೀವ್ರತೆಯ ಕಂಪನವು ಬೆಳಿಗ್ಗೆ (ಭಾರತೀಯ ಕಾಲಮಾನ) 4.51ರ ಸುಮಾರಿಗೆ ಸಂಭವಿಸಿದೆ. ಬೆಳಿಗ್ಗ 5.16ರ ಸುಮಾರಿಗೆ 4.7ರಷ್ಟು ತೀವ್ರತೆಯ ಇನ್ನೊಂದು ಕಂಪನ ಉಂಟಾಗಿದೆ. ಕಂಪನದ ಕೇಂದ್ರವು ಕಾಬೂಲ್‌ನಿಂದ 280 ಕಿ.ಮೀ. ದೂರದಲ್ಲಿತ್ತು.

ನೆರವಿನ ಹಸ್ತ ಚಾಚಿದ ಭಾರತ

ನವದೆಹಲಿ: ಮ್ಯಾ‌ನ್ಮಾರ್‌ನಲ್ಲಿ ನೆರವು ಕಾರ್ಯಾಚರಣೆಗೆ ಕೈಜೋಡಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್‌) 80 ಮಂದಿಯ ತುಕಡಿಯನ್ನು ಭಾರತವು ಕಳುಹಿಸಲಿದೆ. ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಈ ತುಕಡಿಯನ್ನು ರವಾನಿಸಲಾಗುತ್ತಿದೆ.

2015ರಲ್ಲಿ ನೇಪಾಳದಲ್ಲಿ ಭೂಕಂಪನ ಉಂಟಾದಾಗ ಹಾಗೂ 2023ರಲ್ಲಿ ಟರ್ಕಿಯಲ್ಲಿ ಭೂಕಂಪನ ಸಂಭವಿಸಿದಾಗ ಭಾರತವು ಎನ್‌ಡಿಆರ್‌ಎಫ್‌ ತಂಡವನ್ನು ಅಲ್ಲಿಗೆ ಕಳುಹಿಸಿತ್ತು. ನೆರೆಯ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ದೇಶಗಳು ಭೂಕಂಪನದಿಂದ ನಲುಗಿದ ನಂತರ ‘ಆಪರೇಷನ್ ಬ್ರಹ್ಮ’ ಹೆಸರಿನಲ್ಲಿ ನೆರವಿನ ಹಸ್ತ ಚಾಚಿರುವ ಭಾರತವು ಮ್ಯಾನ್ಮಾರ್‌ಗೆ 15 ಟನ್‌ಗಳಷ್ಟು ಪರಿಹಾರ ಸಾಮಗ್ರಿ ರವಾನಿಸಿದೆ.

ಡೇರೆಗಳು ಹೊದಿಕೆ ಸೇವಿಸಲು ಸಿದ್ಧವಾಗಿರುವ ಊಟ ನೀರು ಶುದ್ಧೀಕರಣ ಯಂತ್ರ ಸೌರದೀಪಗಳು ವಿದ್ಯುತ್ ಜನರೇಟರ್‌ಗಳು ಅಗತ್ಯ ಔಷಧಗಳನ್ನು ಹೊತ್ತ ವಾಯುಪಡೆಯ ವಿಮಾನವು ಮ್ಯಾನ್ಮಾರ್‌ನ ಯಾಂಗೂನ್‌ ನಗರಕ್ಕೆ ತೆರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಎರಡು ವಿಮಾನಗಳಲ್ಲಿ ಅಗತ್ಯ ವಸ್ತುಗಳನ್ನು ಭಾರತದಿಂದ ಕಳುಹಿಸಲಾಗುತ್ತದೆ. ಜೊತೆಗೆ ನೌಕಾಪಡೆಯ ಎರಡು ಹಡಗುಗಳು ಕೂಡ ನೆರವಿಗೆ ಮ್ಯಾನ್ಮಾರ್‌ನತ್ತ ಧಾವಿಸಲಿವೆ.

ಮೋದಿ ಮಾತುಕತೆ:

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥ ಮಿನ್ ಆಂಗ್ ಹ್ಲಾಯಿಂಗ್‌ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತನಾಡಿದ್ದಾರೆ ಭಾರತವು ಮ್ಯಾನ್ಮಾರ್‌ನ ನೆರವಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.