ADVERTISEMENT

ಭಾರತದ ಪ್ರಧಾನಿಗೆ ಇಥಿಯೋಪಿಯಾ ಪ್ರಶಸ್ತಿ: ಮೋದಿಗಿದು 28ನೇ ಅಂತರರಾಷ್ಟ್ರೀಯ ಗೌರವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 9:11 IST
Last Updated 17 ಡಿಸೆಂಬರ್ 2025, 9:11 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯ ಗೌರವ ದೊರೆತಿದೆ. ಮಂಗಳವಾರ ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಪ್ರಶಸ್ತಿ ಪ್ರದಾನ ಮಾಡಿದರು.

ಮಂಗಳವಾರ ಇಥಿಯೋಪಿಯಾ ರಾಜದಾನಿ ಅಡಿಸ್ ಅಬಬಾದ ಅಂತರರಾಷ್ಟ್ರೀಯ ಕನ್ವೆನ್ಷನ್ ಕೇಂದ್ರದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆ ಮತ್ತು ಜಾಗತಿಕ ರಾಜಕಾರಣಿಯಾಗಿ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಈ ಪ್ರಶಸ್ತಿಯನ್ನು ಪಡೆದ ಇತರೆ ದೇಶದ ಮೊದಲ ನಾಯಕ ಪ್ರಧಾನಿ ಮೋದಿ ಎಂದು ವರದಿ ತಿಳಿಸಿದೆ.

ನನಗೆ ಇಥಿಯೋಪಿಯಾದ ಅತ್ಯುನ್ನತ ‘ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿ ಲಭಿಸಿದ್ದು, ಇದನ್ನು ನಾನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ ಎಂದು ಮೋದಿ, ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕ 28ನೇ ಅಂತರರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಗೃಹ ಸಚಿವ ಅಮಿತ್ ಶಾ ಎಕ್ಭ್‌ ಪೋಸ್ಟ್‌ ಮೂಲಕ ಕೋರಿದ್ದಾರೆ.

ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ ಸಿಕ್ಕಿದ್ದು, ಅವರ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತದ ಘನತೆ ಹೆಚ್ಚಿರುವುದನ್ನು ತೋರಿಸುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಇದು ಹೆಮ್ಮೆಯ ವಿಷಯವಾಗಿದೆ ಎಂದು ಶಾ ಬರೆದುಕೊಂಡಿದ್ದಾರೆ.

ಈ ಗೌರವವು ಭಾರತ ಮತ್ತು ಇಥಿಯೋಪಿಯಾ ಸಂಬಂಧದಲ್ಲಿ ಒಂದು ಮೈಲಿಗಲ್ಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.