ADVERTISEMENT

ಆಫ್ಗನ್‌: ಬಾಲಕಿಯರ ಶಾಲೆ ಆರಂಭಿಸದಿದ್ದರೆ ದೇಶದಾದ್ಯಂತ ಪ್ರತಿಭಟನೆ ಎಚ್ಚರಿಕೆ

ಏಜೆನ್ಸೀಸ್
Published 27 ಮಾರ್ಚ್ 2022, 13:37 IST
Last Updated 27 ಮಾರ್ಚ್ 2022, 13:37 IST
ಶಾಲೆ ಆರಂಭಕ್ಕೆ ಒತ್ತಾಯಿಸಿ ಬಾಲಕಿಯರು ಮತ್ತು ಮಹಿಳೆಯರು ಶನಿವಾರ ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆ ಆರಂಭಕ್ಕೆ ಒತ್ತಾಯಿಸಿ ಬಾಲಕಿಯರು ಮತ್ತು ಮಹಿಳೆಯರು ಶನಿವಾರ ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸಿದರು.   

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿ ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ಇನ್ನೊಂದು ವಾರದಲ್ಲಿ ಆರಂಭಿಸದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಹಿಳಾ ಹಕ್ಕು ಹೋರಾಟಗಾರರು ಭಾನುವಾರ ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್‌ ಸರ್ಕಾರ ಏಳು ತಿಂಗಳ ಬಳಿಕ ಕಳೆದ ವಾರ ಬಾಲಕಿಯರ ಶಾಲೆ ತೆರೆಯಲು ಅನುಮತಿ ನೀಡಿತ್ತು. ಮಾಧ್ಯಮಿಕ ಶಿಕ್ಷಣ ಶಾಲೆಗೆ ಸಾವಿರಾರು ಬಾಲಕಿಯರು ಪ್ರವೇಶಾತಿ ಪಡೆದಿದ್ದರು. ಇದಾದ ಕೆಲ ಗಂಟೆಗಳಲ್ಲಿಯೇ ಅಧಿಕಾರಿಗಳು ಬಾಲಕಿಯರ ಶಾಲೆ ಮುಚ್ಚಲು ಆದೇಶಿಸಿದ್ದರು. ಇದು ಅಂತರರಾಷ್ಟ್ರೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾಬೂಲ್‌ನಲ್ಲಿ ನಾಲ್ಕು ಮಹಿಳಾ ಹೋರಾಟಗಾರ್ತಿಯರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಲೀಮಾ ನಸಾರಿ ಅವರು, ಒಂದು ವಾರದೊಳಗೆ ಬಾಲಕಿಯರ ಶಾಲೆ ತೆರೆಯುವಂತೆ ಇಸ್ಲಾಮಿಕ್‌ ಎಮಿರೈಟ್ಸ್‌ ನಾಯಕರಿಗೆ ಕರೆ ನೀಡುತ್ತಿದ್ದೇವೆ. ವಾರದ ಬಳಿಕವೂ ಶಾಲೆಗಳು ಮುಚ್ಚಿದ್ದರೆ, ನಾವೇ ಅವುಗಳನ್ನು ತೆರೆಯುತ್ತೇವೆ ಹಾಗೂ ನಮ್ಮ ಬೇಡಿಕೆ ಈಡೇರಿಕೆಯಾಗುವ ವರೆಗೂ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ಬಾಲಕಿಯರಿಗಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಶಾಲೆಗಳನ್ನು ತಾಲಿಬಾನ್‌ ಸರ್ಕಾರ ತೆರೆಯಬೇಕೆಂದು ಒತ್ತಾಯಿಸಿದರು.

ಬಾಲಕಿಯರ ಶಾಲೆ ಆರಂಭಕ್ಕೆ ಒತ್ತಾಯಿಸಿ ಹಲವು ಶಾಲಾ ಬಾಲಕಿಯರು ಮತ್ತು ಮಹಿಳೆಯರು ಶನಿವಾರ ಕಾಬೂಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ಬಾಲಕಿಯರಿಗೆ ಶಾಲೆ ನಿರಾಕರಿಸಲು ತಾಲಿಬಾನ್ ‌ಶಿಕ್ಷಣ ಸಚಿವಾಲಯ ತನ್ನ ನೀತಿಯಲ್ಲಿನ ಸ್ಪಷ್ಟ ಕಾರಣ ನೀಡಿಲ್ಲ. ಆದರೆ ಈ ಕುರಿತು ಎಎಫ್‌ಪಿಗೆ ಪ್ರತಿಕ್ರಿಯಿಸಿರುವ ತಾಲಿಬಾನ್‌ ಮುಖಂಡ ಸುಹೇಲ್‌ ಶಾಹೀಲ್‌, ಶಾಲೆ ಆರಂಭಕ್ಕೆ ಕೆಲ ಪ್ರಾಯೋಗಿಕ ಸಮಸ್ಯೆಗಳಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.