ಬ್ರಸೆಲ್ಸ್: ತನ್ನ ಸದಸ್ಯ ರಾಷ್ಟ್ರಗಳು ಅಮೆರಿಕದಿಂದ ಖರೀದಿಸಿರುವ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಉಕ್ರೇನ್‌ಗೆ ಪೂರೈಸುವ ಪ್ರಕ್ರಿಯೆಯನ್ನು ನ್ಯಾಟೊ ಶುರು ಮಾಡಿದೆ.
ವಾಯು ರಕ್ಷಣಾ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳು ಸೇರಿದಂತೆ 57.8 ಕೋಟಿ ಡಾಲರ್ (ಅಂದಾಜು 5,073 ಕೋಟಿ) ಮೊತ್ತದ ಯುದ್ಧ ಸಾಮಗ್ರಿಗಳನ್ನು ಉಕ್ರೇನ್‌ಗೆ ನೀಡುವುದಾಗಿ ನೆದರ್ಲೆಂಡ್ಸ್ ಮಂಗಳವಾರ ಹೇಳಿದೆ.
ಯುದ್ಧಭೂಮಿಯಲ್ಲಿ ಉಕ್ರೇನ್‌ನ ಆದ್ಯತೆಯನ್ನು ಪರಿಗಣಿಸಿ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತದೆ. ಇದೇ ತಿಂಗಳಲ್ಲಿ ಎರಡು ಪ್ಯಾಕೇಜ್‌ಗಳಲ್ಲಿ ಶಸ್ತ್ರಾಸ್ತ್ರ ಪೂರೈಸಲಾಗುವುದು ಎಂದು ನ್ಯಾಟೊ ತಿಳಿಸಿದೆ.
ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ರಷ್ಯಾ ನಿರಂತರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಅದನ್ನು ತಡೆಯಲು ವಾಯು ರಕ್ಷಣಾ ವ್ಯವಸ್ಥೆಯು ಉಕ್ರೇನ್ ಸೇನೆಗೆ ಅತಿ ಅಗತ್ಯವಾಗಿದೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನ 12 ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಗಡಿಗೆ ಹೊಂದಿರುವ ಉಕ್ರೇನ್‌ನ ಗ್ರಾಮಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ರಷ್ಯಾ ಮುಂದುವರಿಸಿದೆ. ಪ್ರಸ್ತುತ, ಉಕ್ರೇನ್‌ನ ಪೂರ್ವ ಭಾಗದ ಪೊಕ್ರೊವಸ್ಕ್ ನಗರವನ್ನು ವಶಪಡಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿದೆ. ಈ ನಗರ ರಷ್ಯಾದ ಕೈವಶವಾದರೆ, ಉಕ್ರೇನ್‌ನ ಇನ್ನಷ್ಟು ಒಳಭಾಗಕ್ಕೆ ನುಗ್ಗುವುದು ರಷ್ಯಾ ಸೇನೆಗೆ ಸುಲಭವಾಗಲಿದೆ.
ನ್ಯಾಟೊ ಉಕ್ರೇನ್‌ಗೆ ಪೂರೈಸಲು ಬಯಸಿರುವ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಯುರೋಪಿನ ಮಿತ್ರರಾಷ್ಟ್ರಗಳು ಮತ್ತು ಕೆನಡಾ ಅಮೆರಿಕದಿಂದ ಖರೀದಿಸುತ್ತಿವೆ. ಡೊನಾಲ್ಡ್ ಟ್ರಂಪ್ ಆಡಳಿತವು ಉಕ್ರೇನ್‌ಗೆ ನೇರವಾಗಿ ಶಸ್ತ್ರಾಸ್ತ್ರ ಪೂರೈಸುತ್ತಿಲ್ಲ.
ಉಕ್ರೇನ್‌ಗೆ ಎರಡು ‘ಪೇಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆ’ಗಳನ್ನು ಪೂರೈಸುವುದಾಗಿ ಜರ್ಮನಿ ಕಳೆದ ಶುಕ್ರವಾರ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.