ADVERTISEMENT

Nepal Unrest: ನೇಪಾಳದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ ಸೇನೆ

ಏಜೆನ್ಸೀಸ್
Published 10 ಸೆಪ್ಟೆಂಬರ್ 2025, 13:43 IST
Last Updated 10 ಸೆಪ್ಟೆಂಬರ್ 2025, 13:43 IST
<div class="paragraphs"><p>ನೇಪಾಳಿ ಸೈನಿಕರಿಂದ ಪಹರೆ</p></div>

ನೇಪಾಳಿ ಸೈನಿಕರಿಂದ ಪಹರೆ

   

– ರಾಯಿಟರ್ಸ್ ಚಿತ್ರ

ಕಠ್ಮಂಡು: ಘರ್ಷಣೆಯನ್ನು ಹತ್ತಿಕ್ಕುವ ಸಲುವಾಗಿ ನೇಪಾಳ ಸೇನೆಯು ರಾಷ್ಟ್ರದಾದ್ಯಂತ ನಿರ್ಬಂಧ ಆದೇಶ ಮತ್ತು ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.

ADVERTISEMENT

ಕೆ.ಪಿ ಶರ್ಮಾ ಓಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸೇನೆಯು ನಿರ್ಬಂಧಗಳನ್ನು ವಿಧಿಸುವ ಮೂಲಕ ದೇಶವನ್ನು ನಿಯಂತ್ರಣಕ್ಕೆ ತೆಗದುಕೊಂಡಿದೆ.

ಪ್ರತಿಭಟನಕಾರರು ಸಂಸತ್‌ ಕಟ್ಟಡ, ಪ್ರಧಾನಿ ನಿವಾಸ ಸೇರಿದಂತೆ ದೇಶದ ಪ್ರಮುಖ ಕಟ್ಟಡಗಳಿಗೆ ಬೆಂಕಿಹಚ್ಚುವ ಮೂಲಕ ಹಿಂಸಾಚಾರ ನಡೆಸಿದ ಕಾರಣ ಮಂಗಳವಾರ ರಾತ್ರಿಯಿಂದಲೇ ಎಲ್ಲ ಭದ್ರತಾ ಕಾರ್ಯಾಚರಣೆಗಳನ್ನು ಸೇನೆ ಬಿಗಿಗೊಳಿಸಿದೆ.

ಬುಧವಾರ ಸಂಜೆ 5 ಗಂಟೆವರೆಗೆ ನಿರ್ಬಂಧ ಆದೇಶಗಳು ಜಾರಿಯಲ್ಲಿದ್ದವು. ನಿಷೇಧಾಜ್ಞೆಯು ಗುರುವಾರ ಸಂಜೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಸೇನೆ ತಿಳಿಸಿದೆ.

ರಸ್ತೆಗಳು, ಪ್ರಮುಖ ಸ್ಥಳಗಳಲ್ಲಿ ಸೈನಿಕರನ್ನು ನಿಯೋಜಿಸಲಾಗಿದ್ದು, ಜನ ಸಂಚಾರವಿಲ್ಲದೇ ರಾಜಧಾನಿ ಕಠ್ಮಂಡು ಬುಧವಾರ ಸ್ತಬ್ಧವಾಗಿತ್ತು.

ಪ್ರತಿಭಟನೆ, ಹಿಂಸಾಚಾರ, ಬೆಂಕಿ ಹಚ್ಚುವದು ಅಥವಾ ಜನರ ಮತ್ತು ಕಟ್ಟಡಗಳ ಮೇಲೆ ಯಾವುದೇ ರೀತಿಯ ದಾಳಿಯನ್ನು ನಡೆಸುವುದನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸೇನೆ ಎಚ್ಚರಿಸಿದೆ.

‘ಅತ್ಯಾಚಾರ ಮತ್ತು ಭೀಕರ ದಾಳಿಗಳು ನಡೆಯುವ ಸಾಧ್ಯತೆಯಿದ್ದು, ಅದಕ್ಕಾಗಿ ನಿರ್ಬಂಧ ಮತ್ತು ನಿಷೇಧಾಜ್ಞೆಯನ್ನು ಹೇರಲಾಗಿದೆ’ ಎಂದು ಸೇನೆ ಹೇಳಿದೆ.

ವಿಶ್ವನಾಯಕರ ಕಳವಳ

ನೇಪಾಳದ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಪ್ರಾಣಹಾನಿಯಾಗಿರುವುದು ದುಃಖ ತಂದಿದೆ– ಆ್ಯಂಟನಿಯೊ ಗುಟೆರಸ್‌ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಆಂತರಿಕ ಸಮಸ್ಯೆಗಳನ್ನು ನಿಭಾಯಿಸಿ ಸಾಮಾಜಿಕ ಸುವ್ಯವಸ್ಥೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೇಪಾಳದ ಎಲ್ಲ ವ್ಯವಸ್ಥೆಗಳು ಪ್ರಯತ್ನಿಸಬೇಕು – ಲಿನ್ ಜಿಯಾನ್ ಚೀನಾ ವಿದೇಶಾಂಗ ಇಲಾಖೆ ವಕ್ತಾರ ನೇಪಾಳದಲ್ಲಿನ ಬೆಳವಣಿಗೆಗಳು ಕಳವಳಕಾರಿಯಾಗಿವೆ. ಸದ್ಯದ ಬಿಕ್ಕಟ್ಟಿಗೆ ಶಾಂತಿಯುತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬೇಕು –ರಷ್ಯಾ ವಿದೇಶಾಂಗ ಸಚಿವಾಲಯ 

ಪ್ರಮುಖಾಂಶಗಳು

  • ಹಿಂಸಾಚಾರದಲ್ಲಿ ಭಾಗಿಯಾದ 27 ಜನರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

  • ಕಠ್ಮಂಡುವಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬುಧವಾರ ಮತ್ತೆ ಕಾರ್ಯಾರಂಭಿಸಿದೆ

  • ಏರ್‌ ಇಂಡಿಯಾ ಸ್ಪೈಸ್‌ಜೆಟ್‌ ಮತ್ತು ಇಂಡಿಗೊ ಸಂಸ್ಥೆಗಳು ಭಾರತದಿಂದ ಕಠ್ಮಂಡುವಿಗೆ ಮತ್ತು ಅಲ್ಲಿಂದ ಭಾರತಕ್ಕೆ ವಿಮಾನಗಳ ಸಂಚಾರವನ್ನು ಬುಧವಾರವೂ ರದ್ದುಗೊಳಿಸಿದ್ದವು 

700 ಕೈದಿಗಳು ಪರಾರಿ ಐವರ ಸಾವು

ಪಶ್ಚಿಮ ನೇಪಾಳದಲ್ಲಿನ ಜೈಲಿನಲ್ಲಿ ಪೊಲೀಸರೊಂದಿಗೆ ನಡದ ಘರ್ಷಣೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಐವರು ಬಾಲಕರು ಮೃತಪಟ್ಟಿದ್ದಾರೆ. ದೇಶದಾದ್ಯಂತ ವಿವಿಧ ಜೈಲುಗಳಿಂದ 7000ಕ್ಕೂ ಅಧಿಕ ಕೈದಿಗಳು ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನೆಯ ಲಾಭ ಪಡೆದುಕೊಂಡ ಕೈದಿಗಳು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿ ಪರಾರಿಯಾಗಿದ್ದಾರೆ. ಪರಾರಿಯಾದವರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ 76 ಬಾಲಕರು ಸಹ ಸೇರಿದ್ದಾರೆ.

ರಾಜಸ್ಥಾನದಿಂದ ವಿಶೇಷ ಘಟಕ

ಜೈಪುರ: ಹಿಂಸೆಯಿಂದ ನಲುಗಿರುವ ನೇಪಾಳದಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ನೆರವು ನೀಡುವುದಕ್ಕಾಗಿ ರಾಜಸ್ಥಾನ ಸರ್ಕಾರ ವಿಶೇಷ ಘಟಕ ಆರಂಭಿಸಿದೆ. ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಜೊತೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರವಾಸಿಗರ ಸುರಕ್ಷಿತ ವಾಪಸ್‌ಗೆ ಕ್ರಮ: ಮಮತಾ

ಜಲಪೈಗುರಿ: ನೇಪಾಳದಲ್ಲಿ ಸಿಲುಕಿರುವ ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ. ಒಂದೆರಡು ದಿನಗಳಲ್ಲಿ ಅವರನ್ನು ವಾಪಸ್ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ. ನೇಪಾಳ ಪ್ರವಾಸಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿರುವವರನ್ನು ಸುರಕ್ಷಿತವಾಗಿ ಕರೆತರಲು ನಮ್ಮ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಮತಾ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.