
ಕಠ್ಮಂಡು: ಭಾರಿ ಮಳೆಯಿಂದ ನೇಪಾಳದಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದ ಪರಿಣಾಮ 51 ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿಯಿಂದ ಪೂರ್ವ ನೇಪಾಳದ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿ ಸಂಭವಿಸಿದ ಅವಘಡಗಳಲ್ಲಿ ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯೊಂದರಲ್ಲೇ 37 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪಂಚತಾರ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಖೋಟಂಗ್‌ನಲ್ಲಿ ಒಬ್ಬರು ಮತ್ತು ಉದಯಪುರದಲ್ಲಿ ಇಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸುವಾ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿಹೋಗಿ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ. ಪಂಚತಾರಾ ಜಿಲ್ಲೆಯಲ್ಲೂ ವ್ಯಕ್ತಿಯೊಬ್ಬರು ಅವಶೇಷಗಳಡಿ ಸಿಲುಕಿದ್ದಾರೆ. ಇಲಾಮ್, ಬಾರಾ ಮತ್ತು ಕಠ್ಮಂಡುವಿನಲ್ಲಿಯೂ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ. ಗರ್ಭಿಣಿ ಸೇರಿದಂತೆ ನಾಲ್ವರನ್ನು ಭದ್ರತಾ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಶಿ, ಮಧೆಸ್, ಬಾಗಮತಿ, ಗಂಡಕಿ ಮತ್ತು ಲುಂಬಿನಿ ಪ್ರಾಂತ್ಯಗಳಲ್ಲಿ ಮುಂಗಾರು ಚುರುಕಾಗಿದೆ. ಬಾಗಮತಿ ಮತ್ತು ಪೂರ್ವ ರಾಪ್ಟಿ ನದಿಭಾಗದ ಪ್ರದೇಶಗಳಿಗೆ ‘ರೆಡ್ ಅಲರ್ಟ್’ ಘೋಷಣೆಯಾಗಿದೆ.
ಮುಂದಿನ ಮೂರು ದಿನ ಭಾರಿ ಮಳೆ ಮತ್ತು ಭೂಕುಸಿತ ಸಾಧ್ಯತೆಯಿರುವ ಕಾರಣ ನೇಪಾಳ ರಾಜಧಾನಿ ಕಠ್ಮಂಡುವಿಗೆ ವಾಹನ ಪ್ರವೇಶ ಮತ್ತು ನಿರ್ಗಮನವನ್ನು ಶನಿವಾರದಿಂದ ಸೋಮವಾರದವರೆಗೆ ನಿರ್ಬಂಧಿಸಲಾಗಿದೆ. ನೇಪಾಳದೊಳಗಿನ ಪ್ರಾದೇಶಿಕ ವಿಮಾನ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ.
ರೌತಹಟ್ ಜಿಲ್ಲೆಯಲ್ಲಿ ಮೂವರು ಮತ್ತು ಖೋಟಂಗ್ ಜಿಲ್ಲೆಯಲ್ಲಿ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ನೇಪಾಳದ ವಿವಿಧೆಡೆ 9 ಮಂದಿ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಪಂಚತಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದಾರೆ.
ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಯಾವುದೇ ರೀತಿಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ. ‘ಸಂಕಷ್ಟದ ಸಮಯದಲ್ಲಿ ನೇಪಾಳ ಸರ್ಕಾರ ಮತ್ತು ಅಲ್ಲಿನ ಜನರ ಜೊತೆ ಭಾರತ ನಿಲ್ಲಲಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭೂತಾನ್‌ನಲ್ಲಿ ಸಂಭವಿಸಿದ್ದ ಪ್ರವಾಹದಿಂದ ಸಂತ್ರಸ್ತರಾಗಿದ್ದವರ ರಕ್ಷಣೆಗೆ ಭಾರತೀಯ ಸೇನೆಯು ಕೈಜೋಡಿಸಿದೆ. ಅಮೋಚು ನದಿಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದವು. ಪ್ರತಿಕೂಲ ಹವಾಮಾನದಿಂದಾಗಿ ಭೂತಾನ್ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯ ನಡೆಸಲು ವಿಪಲವಾಗಿದ್ದವು. ಭೂತಾನ್ ಸರ್ಕಾರದ ಕೋರಿಕೆಗೆ ಸ್ಪಂದಿಸಿದ ಭಾರತ ಹೆಲಿಕಾಪ್ಟರ್‌ಗಳನ್ನು ಕಳುಹಿಸಿದೆ.
ಹಿಮಪಾತದಿಂದ ರಸ್ತೆಸಂಚಾರ ಸ್ಥಗಿತಗೊಂಡಿರುವುದರಿಂದ ಒಂದು ಸಾವಿರ ಮಂದಿ ಮೌಂಟ್ ಎವರೆಸ್ಟ್‌ನ ಟಿಬೆಟ್ ಭಾಗದ ಪೂರ್ವ ಇಳಿಜಾರಿನಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಇಳಿಜಾರಿನಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಸ್ಥಳೀಯರು ಮತ್ತು ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಕೆಲ ಪ್ರವಾಸಿಗರನ್ನು ಈಗಾಗಲೇ ಕೆಳಗೆ ಕರೆತರಲಾಗಿದೆ. ಶುಕ್ರವಾರ ಆರಂಭಗೊಂಡಿದ್ದ ಹಿಮಪಾತ ಶನಿವಾರವೂ ಮುಂಂದುವರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.