ADVERTISEMENT

‘ನೇಪಾಳದಲ್ಲಿ ಅತಂತ್ರ ಸಂಸತ್‌ ಸಾಧ್ಯತೆ’

ಸಾರ್ವತ್ರಿಕ ಚುನಾವಣೆ ಕುರಿತು ರಾಜಕೀಯ ತಜ್ಞರ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 13:58 IST
Last Updated 17 ನವೆಂಬರ್ 2022, 13:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಠ್ಮಂಡು: ಸಾರ್ವತ್ರಿಕ ಚುನಾವಣೆಯ ನಂತರ ನೇಪಾಳದಲ್ಲಿ ಅತಂತ್ರ ಸಂಸತ್‌ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ರಾಜಕೀಯ ಸ್ಥಿರತೆ ಕಂಡುಬರುವ ಸಾಧ್ಯತೆಗಳು ಕಡಿಮೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಸಂಸತ್‌ ಹಾಗೂ ಪ್ರಾಂತೀಯ ಅಸೆಂಬ್ಲಿಗೆ ಇದೇ 20ರಂದು ಮತದಾನ ನಡೆಯಲಿದೆ. ನೇಪಾಳ ಕಾಂಗ್ರೆಸ್ ನೇತೃತ್ವದ ಪ್ರಜಾಸತ್ತಾತ್ಮಕ ಮೈತ್ರಿಕೂಟ ಮತ್ತು ಹಿಂದೂ-ರಾಜಪ್ರಭುತ್ವ ಪರವಾದ ಮೈತ್ರಿಕೂಟ ನಡುವೆ ಪೈಪೋಟಿ ಇದೆ.

ಸಿಪಿಎನ್-ಮಾವೋವಾದಿ, ಸಿಪಿಎನ್-ಏಕೀಕೃತ ಸಮಾಜವಾದಿ ಮತ್ತು ಲೋಕತಾಂತ್ರಿಕ ಸಮಾಜವಾದಿ ಪಕ್ಷಗಳು ನೇಪಾಳಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿವೆ. ಹಿಂದೂ ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮತ್ತು ಜನತಾ ಸಮಾಜವಾದಿ ಪಕ್ಷಗಳು ಸಿಪಿಎಣ್‌–ಯುಎಂಎಲ್‌ ನೇತೃತ್ವದ ಮೈತ್ರಿಕೂಟದ ಅಂಗಪಕ್ಷಗಳಾಗಿವೆ.

ADVERTISEMENT

ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಸಂಸತ್ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದ್ದು, ನೇಪಾಳಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೆ.ಪಿ.ಶರ್ಮಾ ಓಲಿ ನೇತೃತ್ವದ ಸಿಪಿಎನ್-ಯುಎಂಎಲ್, ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಆ ಮೈತ್ರಿಕೂಟವು ಹೊಸ ಸಂಸತ್ತಿನಲ್ಲಿ ಪ್ರಮುಖ ಪಾಲು ಪಡೆಯುವ ಸಾಧ್ಯತೆಯಿಲ್ಲ ಎಂದೂ ವಿಶ್ಲೇಷಿಸಿದ್ದಾರೆ.

‘ಎರಡು ಚುನಾವಣಾ ಪೂರ್ವ ಮೈತ್ರಿಗಳಲ್ಲಿ ಒಂದು ಚುನಾವಣೆ ಬಳಿಕ ಅತಿದೊಡ್ಡ ಗುಂಪಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಇದು ರಚಿಸುವ ಸರ್ಕಾರವು ನೇಪಾಳದಲ್ಲಿ ರಾಜಕೀಯ ಸ್ಥಿರತೆ ಒದಗಿಸುವ ಸಾಧ್ಯತೆಯಿಲ್ಲ’ ಎಂದು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಧ್ರುವ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.