ಜೆನ್–ಝಿ ಪ್ರತಿಭಟನೆ ಸಂದರ್ಭದ ಚಿತ್ರ
ಕೃಪೆ: ಪಿಟಿಐ
ಕಠ್ಮಂಡು: ನೇಪಾಳದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಜೆನ್–ಝಿ ಗುಂಪು ಶನಿವಾರ ಘೋಷಿಸಿದೆ.
ನೇಪಾಳ ಸಂಸತ್ತಿಗೆ 2026ರ ಮಾರ್ಚ್ 5ರಂದು ಚುನಾವಣೆ ನಿಗದಿಯಾಗಿದೆ.
ಆಡಳಿತದಲ್ಲಿನ ಭ್ರಷ್ಟಾಚಾರ ಹಾಗೂ ಸಾಮಾಜಿಕ ಮಾಧ್ಯಮದ ಮೇಲೆ ನಿರ್ಬಂಧ ಹೇರಿದ್ದನ್ನು ಖಂಡಿಸಿ ಜೆನ್–ಝಿ ಗುಂಪು ಸರ್ಕಾರದ ವಿರುದ್ಧ ಕಳೆದ ತಿಂಗಳು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮವಾಗಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಪತನಗೊಂಡಿತ್ತು.
ಬಳಿಕ ರಚನೆಯಾಗಿರುವ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಸೆಪ್ಟೆಂಬರ್ 12ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಜೆನ್–ಝಿ ಹೋರಾಟದ ನೇತೃತ್ವ ವಹಿಸಿದ್ದ ಮಿರಾಜ್ ಧುಂಗನಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ. ಸರ್ಕಾರದ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಜೆನ್–ಝಿ ಯುವ ಸಮೂಹವನ್ನು ಒಗ್ಗೂಡಿಸಲು ರಾಜಕೀಯ ಪಕ್ಷ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ವಿದೇಶದಲ್ಲಿ ವಾಸಿಸುವ ನೇಪಾಳಿಗರಿಗೆ ಮತದಾನದ ಹಕ್ಕು, ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನಾಗರಿಕರ ನೇತೃತ್ವದ ತನಿಖಾ ಸಮಿತಿ ರಚನೆ ಹಾಗೂ ಆರ್ಥಿಕ ಪರಿವರ್ತನೆ ಕುರಿತು ಸ್ಪಷ್ಟ ನೀತಿಯನ್ನು ಅಳವಡಿಸಿಕೊಳ್ಳುವುದನ್ನು ಪಕ್ಷದ ಕಾರ್ಯಸೂಚಿಯಲ್ಲಿ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
'ಭ್ರಷ್ಟಾಚಾರ ರಹಿತ, ಪಾರದರ್ಶಕ, ಉತ್ತಮ ಆಡಳಿತಕ್ಕಾಗಿನ ಹೋರಾಟ ಮುಂದುವರಿಯಲಿದೆ. ಜೆನ್–ಝಿ ಯುವಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ' ಎಂದು ಒತ್ತಿ ಹೇಳಿರುವ ಅವರು, ರಾಷ್ಟ್ರ ನಿರ್ಮಾಣಕ್ಕಾಗಿ ಸಾಮೂಹಿಕ ಬದ್ಧತೆ ಮತ್ತು ಸಹಕಾರಕ್ಕೆ ಕರೆ ನೀಡಿದ್ದಾರೆ.
ಹೊಸ ಪಕ್ಷಕ್ಕೆ ಸೂಕ್ತ ಹೆಸರಿಗಾಗಿ ಆಲೋಚನೆ ಮುಂದುವರಿದಿದ್ದು, ಸಲಹೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದೂ ಹೇಳಿದ್ದಾರೆ.
'ಭಾರತ, ಚೀನಾ ಗುರಿ'
ಉದ್ಯೊಗಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ ಎಂದಿರುವ ಧುಂಗನಾ, ಇಂತಹ ಸಮಸ್ಯೆಗಳನ್ನು ಹಿಂದಿನ ಸರ್ಕಾರಗಳು ಸರಿಪಡಿಸಬೇಕಿತ್ತು ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ, 'ನಾವು 300 ಕೋಟಿ ಜನಸಂಖ್ಯೆ ಹೊಂದಿರುವ ಎರಡು ಬೃಹತ್ ದೇಶಗಳ (ಭಾರತ, ಚೀನಾ) ನಡುವೆ ಇದ್ದೇವೆ. ಆ ದೇಶಗಳ ಮಾರುಕಟ್ಟೆಗಳನ್ನು ಗಮನದಲ್ಲಿರಿಸಿ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ' ಎಂದಿದ್ದಾರೆ.
ಸ್ಥಗಿತಗೊಂಡಿರುವ ಕೈಗಾರಿಕೆಗಳನ್ನು ಮತ್ತೆ ತೆರೆಯುವ ಹಾಗೂ ಉದ್ಯೋಗ ಸೃಷ್ಟಿ ಕೆಲಸವನ್ನು ಸರ್ಕಾರ ತಕ್ಷಣವೇ ಆರಂಭಿಸಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದೂ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.