ಕಠ್ಮಂಡು: ಶುಕ್ರವಾರ ನಡೆಸಲು ಉದ್ದೇಶಿಸಿದ್ದ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಸಭೆಯನ್ನು ಪುನಃ ಮುಂದೂಡಲಾಗಿದೆ. ಪಕ್ಷದ ಸಭೆಯಲ್ಲಿ ಪ್ರಧಾನಿ ಕೆ.ಪಿ. ಒಲಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂಬ ಕಾರಣಕ್ಕೆ ಈ ಸಭೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ ನಂತರ ಒಲಿ ಅವರ ರಾಜೀನಾಮೆಗೆ ಪಕ್ಷದೊಳಗಿನಿಂದಲೇ ಒತ್ತಡ ಹೆಚ್ಚಾಗಿದೆ. ಆ ಕಾರಣಕ್ಕೆ ಒಲಿ ಅವರು ಪ್ರತಿಬಾರಿಯೂ ಸಭೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಇದಕ್ಕೂ ಹಿಂದೆ ಸಭೆ ನಾಲ್ಕು ಬಾರಿ ಮುಂದೂಡಿಕೆಯಾಗಿದೆ. ದೇಶದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಯ ಕಾರಣ ನೀಡಿ ಈಗ ಐದನೇ ಬಾರಿಗೆ ಸಭೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.
‘ದೇಶದಲ್ಲಿ ಪ್ರವಾಹ, ಭೂಕುಸಿತಗಳು ಸಂಭವಿಸಿದ್ದು, ಪಕ್ಷವು ಪರಿಹಾರ ಕಾರ್ಯಗಳಲ್ಲಿ ನಿರತವಾಗಿದೆ. ಆ ಕಾರಣಕ್ಕೆ ಸಭೆಯನ್ನು ಮುಂದೂಡಲಾಗಿದೆ’ ಎಂದು ನೇಪಾಳ ಕಮ್ಯುನಿಸ್ಟ್ ಪಕ್ಷದ ವಕ್ತಾರ ನಾರಾಯಣ ಕಾಜಿ ಶ್ರೇಷ್ಠ ಅವರು ತಿಳಿಸಿರುವುದಾಗಿ ‘ರಿಪಬ್ಲಿಕಾ ಪತ್ರಿಕೆ’ ವರದಿ ಮಾಡಿದೆ.
ನೇಪಾಳದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು ಒಂದು ಮಗುವೂ ಸೇರಿ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ. ಹಲವು ಮನೆಗಳು ಕೊಚ್ಚಿಹೋಗಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.