ADVERTISEMENT

ಕೊರೊನಾವೈರಸ್‌ನ ಹೊಸ ತಳಿ: ಹಲವು ದೇಶಗಳಿಗೆ ಹರಡಿದ ‘ಓಮಿಕ್ರಾನ್’; ತೀವ್ರ ಕಳವಳ

ಕೋವಿಡ್: ವಿಶ್ವ ಆರೋಗ್ಯ ಸಂಸ್ಥೆ ತುರ್ತುಸಭೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 19:56 IST
Last Updated 26 ನವೆಂಬರ್ 2021, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಪ್‌ಟೌನ್‌/ಸಿಂಗಪುರ/ಲಂಡನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮಿಕ್ರಾನ್’ ಎಂಬ ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗಪುರ ಹೇಳಿದೆ.

ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಸಭೆ ನಡೆಸಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ.ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆಓಮಿಕ್ರಾನ್ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.

ADVERTISEMENT

ಈ ತಳಿಯ ಜಿನೋಮ್ ಸೀಕ್ವೆನ್ಸ್ ಅಧ್ಯಯನವನ್ನು ಸಿಂಗಪುರ ನಡೆಸಿತ್ತು. ಮೂಲ ಕೊರೊನಾವೈರಸ್‌ ಮತ್ತು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ರೂಪಾಂತರ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯಈ ತಳಿಗೆ ಇದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.

‘ದಕ್ಷಿಣ ಅಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಾಣುವಿನ ಹೊಸ ತಳಿಯ ವಿರುದ್ಧ ಕೋವಿಡ್‌–19 ತಡೆ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಈ ತಳಿಯ ವೈರಾಣು ಆಫ್ರಿಕಾ ಖಂಡದಿಂದಾಚೆಗೆ ಈಗಾಗಲೇ ಹರಡಿರುವ ಅಪಾಯವಿದೆ. ಇದನ್ನು ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌, ಬೆಲ್ಜಿಯಂ ಮತ್ತು ಹಾಂಗ್‌ಕಾಂಗ್‌ನಲ್ಲಿ ಈ ತಳಿಯ ವೈರಾಣು ತಗುಲಿರುವ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಈ ತಳಿಯ ವೈರಾಣು ಪತ್ತೆಯಾಗಿರುವ ಆಫ್ರಿಕಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರವನ್ನು ಹಲವು ದೇಶಗಳು ನಿಷೇಧಿಸಿವೆ. ಬ್ರಿಟನ್, ಜರ್ಮನಿ ಮತ್ತು ಇಟಲಿ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ನಂತರ, ಮಲೇಷ್ಯಾ, ಸಿಂಗಪುರ, ಇಸ್ರೇಲ್ ಇದನ್ನೇ ಅನುಸರಿಸಿದವು. ಆನಂತರ ಐರೋಪ್ಯ ಒಕ್ಕೂಟವೂ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

‘ಈ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ತಳಿಯ ವಿರುದ್ಧವೂ ಲಸಿಕೆಗಳು ರಕ್ಷಣೆ ನೀಡುತ್ತವೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಒಂದು ವಾರ ಬೇಕಾಗುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆಧಾರ:(ಎಪಿ/ಎಎಫ್‌ಪಿ/ ರಾಯಿಟರ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.