ವೆಲ್ಲಿಂಗ್ಟನ್: ಕ್ರೈಸ್ಟ್‌ಚರ್ಚ್‌ನ ಅವಳಿ ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿ ಬಳಿಕ ಎಚ್ಚೆತ್ತ ನ್ಯೂಜಿಲೆಂಡ್‌ಸರ್ಕಾರ, ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಮಾದರಿಯ ರೈಫಲ್ಸ್ ಮಾರಾಟಕ್ಕೆ ನಿಷೇಧ ಹೇರಿದೆ.
‘ಸೇನೆಯಲ್ಲಿ ಬಳಸುವ ಅರೆ ಸ್ವಯಂಚಾಲಿತ ಬಂದೂಕು, ರೈಫಲ್ಸ್‌ಗಳ ಮೇಲೆ ತಕ್ಷಣದಿಂದಲೇ ನಿಷೇಧ ಹೇರಲಾಗಿದೆ’ ಎಂದು ಪ್ರಧಾನಿ ಜಸಿಂದಾ ಅರ್ಡೆನ್ ಅವರು ಪ್ರಕಟಿಸಿದರು. ಕಳೆದ ವಾರ ನಡೆದ ದುರಂತ ಪುನರಾವರ್ತನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
‘ಕಳೆದ ವಾರ ಭಯೋತ್ಪಾದಕ ದಾಳಿಗೆ ಬಳಸಿದ ಸ್ವಯಂಚಾಲಿತ ಬಂದೂಕು, ಗರಿಷ್ಠ ಸಾಮರ್ಥ್ಯದ ರೈಫಲ್ಸ್, ಮ್ಯಾಗಜೀನ್ ರೈಫಲ್ಸ್‌ಗಳನ್ನು ಸಹ ನಿಷೇಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಕಠಿಣ ಕಾನೂನು ಜಾರಿ: ಬಂದೂಕು ಪಡೆಯಲು ದೇಶದಲ್ಲಿರುವ ಕಾನೂನಿಗೆ ಬದಲಾವಣೆ ತರಲು ನ್ಯೂಜಿಲೆಂಡ್ ಸರ್ಕಾರ ನಿರ್ಧರಿಸಿದೆ. ಅಲ್ಲದೇ, ಕಾನೂನು ಜಾರಿಯಾಗುವ ತನಕ ಯಾವುದೇ ಮಾದರಿಯ ಬಂದೂಕುಗಳನ್ನು ಮಾರದಂತೆ ನಿಷೇಧ ಹೇರಿದೆ.
‘ರಾಷ್ಟ್ರೀಯ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪೊಲೀಸರ ಅನುಮತಿಯಿಲ್ಲದೇ,ಇನ್ನು ಮುಂದೆ ಯಾರೂ ಕೂಡ ಬಂದೂಕು ಖರೀದಿಸುವಂತಿಲ್ಲ’ ಎಂದು ಜೆಸಿಂದಾ ತಿಳಿಸಿದರು.
ಮರುಖರೀದಿಗೆ ಚಿಂತನೆ: ‘ಸಾರ್ವಜನಿಕರಲ್ಲಿರುವ ಬಂದೂಕುಗಳನ್ನು ಮರುಖರೀದಿಸಲಾಗುವುದು ಎಂದ ಅರ್ದೆನ್, ಈಗಿರುವ ಬಂದೂಕುಗಳ ಒಟ್ಟು ಸಂಖ್ಯೆ, ಅದರ ಮೌಲ್ಯ ಆಧರಿಸಿ ಮರುಖರೀದಿಗೆ ಸುಮಾರು ₹90 ಕೋಟಿಯಷ್ಟು ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ’ ಪ್ರಧಾನಿ ಜೆಸಿಂದಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.