ADVERTISEMENT

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ಭಾರತಕ್ಕೂ ಭೇಟಿ ನೀಡಿದ್ದ ಬ್ರೆಂಟನ್‌

ಪಿಟಿಐ
Published 8 ಡಿಸೆಂಬರ್ 2020, 8:22 IST
Last Updated 8 ಡಿಸೆಂಬರ್ 2020, 8:22 IST
ಬ್ರೆಂಟನ್ ಟ್ಯಾರಂಟ್
ಬ್ರೆಂಟನ್ ಟ್ಯಾರಂಟ್   

ಮೆಲ್ಬರ್ನ್: 2019ರ ಮಾರ್ಚ್ ತಿಂಗಳಲ್ಲಿ ಇಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮಂದಿಯ ಸಾವಿಗೆ ಕಾರಣನಾಗಿದ್ದ ಬ್ರೆಂಟನ್ ಟ್ಯಾರಂಟ್, ದಾಳಿಗೂ ಮುನ್ನ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಎಂದು ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಮಾರ್ಚ್‌ 15 ರಂದು ನಡೆದ ದಾಳಿಯಲ್ಲಿ ಐವರು ಭಾರತೀಯರು ಸೇರಿದಂತೆ ಹಲವು ಜನರು ಮೃತಪಟ್ಟಿದ್ದರು, ಹಲವರಿಗೆ ಗಾಯಾಗಳಾಗಿದ್ದವು.

ಬ್ರೆಂಟನ್ ಟ್ಯಾರಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ‍ಪೂರ್ಣಗೊಂಡ ಬಳಿಕ ಸ್ಥಳೀಯ ಜಿಮ್‌ನಲ್ಲಿ ತರಬೇತುದಾರ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. 2012ರಲ್ಲಿ ಗಾಯಗೊಂಡ ಬಳಿಕ ಜಿಮ್‌ ತೊರೆದಿದ್ದ. 2013ರಲ್ಲಿ ನ್ಯೂಜಿಲ್ಯಾಂಡ್‌ಗೆ ಭೇಟಿ ನೀಡಿದ್ದ ಆತ, 2014ರಿಂದ 2017 ತನಕ ವಿವಿಧ ರಾಷ್ಟ್ರಗಳಿಗೆ ಪ್ರಯಾಣಿಸಿದ್ದ ಎಂದು ರಾಯಲ್ ಕಮಿಷನ್ ತನಿಖಾ ವರದಿ ಹೇಳಿದೆ.

ADVERTISEMENT

ಈತ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬಹಳಷ್ಟು ಸಮಯ ಉಳಿದುಕೊಂಡಿದ್ದಾನೆ. 2015 ನವೆಂಬರ್‌ 21ರಿಂದ 2016ರ ಫೆಬ್ರುವರಿ ತನಕ ಬ್ರೆಂಟನ್ ಟ್ಯಾರಂಟ್ ಭಾರತದಲ್ಲಿದ್ದ. ಚೀನಾ, ಜಪಾನ್‌, ರಷ್ಯಾ, ದಕ್ಷಿಣ ಕೊರಿಯಾಕ್ಕೂ ಈತ ಭೇಟಿ ನೀಡಿದ್ದ ಎಂದು ವರದಿ ಹೇಳಿದೆ.

ಯಾವ ಉದ್ದೇಶಕ್ಕಾಗಿ ಬ್ರೆಂಟನ್ ಭಾರತಕ್ಕೆ ಭೇಟಿ ನೀಡಿದ್ದ ಎಂಬುದರ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿಲ್ಲ. ಅಲ್ಲದೆ ಬ್ರೆಂಟನ್‌ ತನ್ನ ಪ್ರಯಣದ ವೇಳೆ ಉಗ್ರ ಸಂಘಟನೆಯೊಂದಿಗೆ ಭೇಟಿ, ತರಬೇತಿ ಪಡೆದಿದ್ದಾನೆಯೇ ಎಂಬುದರ ಬಗ್ಗೆಯೂ ವರದಿಯಲ್ಲಿ ತಿಳಿಸಿಲ್ಲ. ಆದರೆ ಆತ ಬಲಪಂಥೀಯ ಸಾಮಾಜಿಕ ಜಾಲತಾಣ, ಯೂಟ್ಯೂಬ್ ಚಾನೆಲ್‌ಗಳನ್ನು ಫಾಲೋ ಮಾಡುತ್ತಿದ್ದ. ವಲಸೆ, ಬಲಪಂಥೀಯ ರಾಜಕೀಯ ಸಿದ್ಧಾಂತಗಳು ಮತ್ತು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ನಡುವಿನ ಐತಿಹಾಸಿಕ ಹೋರಾಟಗಳ ಬಗ್ಗೆಯೂ ಬ್ರೆಂಟನ್ ಹೆಚ್ಚಾಗಿ ಓದುತ್ತಿದ್ದ ಎಂದು ವರದಿ ಹೇಳಿದೆ.

ಆತನಲ್ಲಿ ಬಾಲ್ಯದಿಂದಲೇ ವರ್ಣಭೇದ ನೀತಿಗಳು ಮೈಗೊಡಿವೆ. ಪಾಲಕರು ಬೇರ್ಪಟ್ಟಿದ್ದು, ತಾಯಿಯ ಅನೈತಿಕ ಸಂಬಂಧಗಳು, ಇಂಟರ್‌ನೆಟ್‌ನಲ್ಲಿ ಸಿಕ್ಕ ವಿಷಯಗಳು ಆತನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.