ADVERTISEMENT

ಲಂಡನ್‌: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಹೈಕೋರ್ಟ್‌ಗೆ ನೀರವ್‌ ಮೋದಿ ಅರ್ಜಿ

ಪಿಟಿಐ
Published 9 ಮೇ 2021, 13:12 IST
Last Updated 9 ಮೇ 2021, 13:12 IST
ನೀರವ್‌ ಮೋದಿ
ನೀರವ್‌ ಮೋದಿ   

ಲಂಡನ್‌: ಭಾರತಕ್ಕೆ ತಮ್ಮನ್ನು ಹಸ್ತಾಂತರಿಸಬೇಕು ಎಂಬ ಗೃಹ ಇಲಾಖೆಯ ಆದೇಶವನ್ನು ಪ್ರಶ್ನಿಸಿ, ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್‌ ಮೋದಿ ಲಂಡನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನೀರವ್‌ ಮೋದಿ ಅರ್ಜಿ ಸಲ್ಲಿಸಿರುವುದನ್ನು ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ (ಸಿಪಿಎಸ್‌) ಖಚಿತಪಡಿಸಿದ್ದು, ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಾಧೀಶರು ತಮ್ಮ ನಿರ್ಧಾರ ಪ್ರಕಟಿಸಬೇಕಿದೆ ಎಂದು ತಿಳಿಸಿದೆ.

ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್‌ನ ಗೃಹ ಇಲಾಖೆಯ ಕಾರ್ಯದರ್ಶಿ ಪ್ರೀತಿ ಪಟೆಲ್‌ ಕಳೆದ ತಿಂಗಳು ಆದೇಶಿಸಿದ್ದಾರೆ.

ADVERTISEMENT

‘ಹಸ್ತಾಂತರ ಮಾಡುವಂತೆ ಗೃಹ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶಗಳಿವೆ ಎಂಬ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರು ಪರಿಶೀಲನೆ ನಡಸುವರು‘ ಎಂದು ಮೂಲಗಳು ಹೇಳಿವೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿ, ಬ್ರಿಟನ್‌ಗೆ ಪರಾರಿಯಾಗಿರುವ ನೀರವ್‌ ಮೋದಿ ಹಸ್ತಾಂತರಕ್ಕೆ ಭಾರತ ಕಾನೂನು ಹೋರಾಟ ನಡೆಸುತ್ತಿದೆ.

ಹಸ್ತಾಂತರ ಕೋರಿ ಭಾರತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಸ್ಯಾಮ್‌ ಗೋಜಿ, ‘ಪ್ರಕರಣಕ್ಕೆ ಸಂಬಂಧಿಸಿ ನೀರವ್‌ ಮೋದಿ ಭಾರತದ ಕೋರ್ಟ್‌ಗಳಲ್ಲಿ ವಿಚಾರಣೆ ಎದುರಿಸುವುದು ಅಗತ್ಯ. ಹೀಗಾಗಿ ಅವರನ್ನು ಹಸ್ತಾಂತರಿಸಬೇಕು’ ಎಂದು ಕಳೆದ ಫೆಬ್ರುವರಿಯಲ್ಲಿ ತೀರ್ಪು ನೀಡಿದ್ದರು.

2019ರ ಮಾರ್ಚ್‌ 19ರಂದು ನೀರವ್‌ ಮೋದಿಯನ್ನು ಬಂಧಿಸಲಾಗಿದ್ದು, ಅಂದಿನಿಂದಲೂ ಅವರನ್ನು ವಾಯವ್ಯ ಲಂಡನ್‌ನ ವಾಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.