ADVERTISEMENT

ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ನೀರವ್‌ ಮೋದಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:30 IST
Last Updated 7 ನವೆಂಬರ್ 2019, 20:30 IST
ನೀರವ್ ಮೋದಿ
ನೀರವ್ ಮೋದಿ   

ಲಂಡನ್: ‘ನನ್ನನ್ನು ಭಾರತಕ್ಕೆ ಹಸ್ತಾಂತರ ಮಾಡಿದ್ದೇ ಆದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ವಜ್ರದ ವ್ಯಾಪಾರಿ ನೀರವ್‌ ಮೋದಿ ಬೆದರಿಕೆ ಹಾಕಿದ್ದಾರೆ.

ಜಾಮೀನು ಕೋರಿ ನಾಲ್ಕನೇ ಬಾರಿ ಅರ್ಜಿ ಸಲ್ಲಿಸಿರುವ ಅವರು, ಅರ್ಜಿ ವಿಚಾರಣೆ ಸಂಬಂಧ ಬುಧವಾರ ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ಗೆ ಹಾಜರಾಗಿದ್ದ ವೇಳೆ ಈ ಬೆದರಿಕೆಯ ಮಾತುಗಳನ್ನಾಡಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಹಾಗೂ ಹಣ ಅಕ್ರಮ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ನೀರವ್‌, ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ಗೃಹಬಂಧನದಲ್ಲಿರುವ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಅರ್ಜಿ ಸಲ್ಲಿಸಿದೆ.

ADVERTISEMENT

ಭಾರತದ ಪರ ವಾದ ಮಂಡಿಸಿದ ಜೇಮ್ಸ್‌ ಲೂಯಿಸ್‌, ‘ಹಸ್ತಾಂತರ ಮಾಡುವಂತೆ ಆದೇಶ ಹೊರಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೀರವ್‌ ಬೆದರಿಕೆ ಹಾಕಿದ್ದಾರೆ. ತಲೆಮರೆಸಿಕೊಳ್ಳಲು ಇತರ ಆರೋಪಿಗಳಿಗೆ ಇವರ ಇಂತಹ ಮಾತುಗಳು ಪ್ರಚೋದನೆ ನೀಡುತ್ತವೆ’ ಎಂದು ಹೇಳಿದರು.

ನೀರವ್‌ ಅವರ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.