ADVERTISEMENT

ಭಯೋತ್ಪಾದಕರಿಗೆ ಬೆಂಬಲ ಸ್ಥಗಿತ ಮಾತಿಗೆ ಸಾಕ್ಷ್ಯಗಳು ಇಲ್ಲ

ಪಿಟಿಐ
Published 13 ಏಪ್ರಿಲ್ 2019, 17:36 IST
Last Updated 13 ಏಪ್ರಿಲ್ 2019, 17:36 IST
   

ವಾಷಿಂಗ್ಟನ್‌: ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವವರ ಮೇಲೆ ಕಣ್ಗಾವಲಿಟ್ಟಿರುವ ಅಂತರರಾಷ್ಟ್ರೀಯ ಹಣಕಾಸು ಕ್ರಿಯಾ ಪಡೆ (ಎಫ್‌ಎಟಿಎಫ್‌) ಕಪ್ಪುಪಟ್ಟಿಗೆ ಸೇರಿಸಬಹುದು ಎಂಬ ಆತಂಕದಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಉಗ್ರರಿಗೆ ಯಾವುದೇ ಬೆಂಬಲ ನೀಡುತ್ತಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಹೈಕಮಿಷನರ್‌ ಹುಸೇನ್‌ ಹಕ್ಕಾನಿ ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಅವರ ಇತ್ತೀಚಿನ ಹೇಳಿಕೆಯು, ಪಾಕಿಸ್ತಾನದ ಯಾವುದೇ ನೀತಿಯ ಬದಲಾವಣೆಯನ್ನು ಪ್ರತಿಬಿಂಬಿಸುವುದಿಲ್ಲ. ಜಾಗತಿಕ ಮಟ್ಟದಲ್ಲಿ ಒತ್ತಡ ನಿರ್ಮಾಣವಾಗಿದ್ದರಿಂದ ಅವರು ಕಳೆದ ತಿಂಗಳು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹಕ್ಕಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಮ್ರಾನ್‌ ಖಾನ್ ನೇತೃತ್ವದ ಸರ್ಕಾರ ಅಥವಾ ಅಲ್ಲಿನ ಸೇನೆಯು ಪಾಕಿಸ್ತಾನದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಮತ್ತು ಮೂಲಸೌಕರ್ಯವನ್ನು ಕಿತ್ತುಹಾಕುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.

ADVERTISEMENT

ಆದರೆ, ಉಗ್ರರ ಬಗೆಗಿನ ಪಾಕಿಸ್ತಾನದ ಧೋರಣೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಆಗಿದೆ’ ಎಂದು ಅವರು ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವು ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಹಾಗೂ ಅದರ ನಾಯಕ ಮಸೂದ್ ಅಜರ್‌ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹಕ್ಕಾನಿ ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.