ADVERTISEMENT

2020ರ ನೊಬೆಲ್ ಪ್ರಶಸ್ತಿ: 'ಹೆಪಟೈಟಿಸ್ ಸಿ ವೈರಸ್' ಪತ್ತೆ ಮಾಡಿದ ಮೂವರಿಗೆ ನೊಬೆಲ್

ವೈದ್ಯಕೀಯ ಕ್ಷೇತ್ರ

ಏಜೆನ್ಸೀಸ್
Published 5 ಅಕ್ಟೋಬರ್ 2020, 10:45 IST
Last Updated 5 ಅಕ್ಟೋಬರ್ 2020, 10:45 IST
ಸಂಶೋಧಕರಾದ ಹಾರ್ವೆ ಜೆ.ಆಲ್ಟರ್‌, ಮಿಷೆಲ್‌ ಹೌಟನ್‌ ಹಾಗೂ ಚಾರ್ಲ್ಸ್‌ ಎಂ.ರೈಸ್–ಚಿತ್ರ: ದಿ ನೊಬೆಲ್‌ ಪ್ರೈಸ್ ಟ್ವಿಟರ್‌ ಖಾತೆ
ಸಂಶೋಧಕರಾದ ಹಾರ್ವೆ ಜೆ.ಆಲ್ಟರ್‌, ಮಿಷೆಲ್‌ ಹೌಟನ್‌ ಹಾಗೂ ಚಾರ್ಲ್ಸ್‌ ಎಂ.ರೈಸ್–ಚಿತ್ರ: ದಿ ನೊಬೆಲ್‌ ಪ್ರೈಸ್ ಟ್ವಿಟರ್‌ ಖಾತೆ   

ಸ್ಟಾಕ್‌ಹೋಮ್‌: ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಲಾಗಿದೆ. 'ಹೆಪಟೈಟಿಸ್ ಸಿ ವೈರಸ್‌' ಪತ್ತೆಗಾಗಿ ಹಾರ್ವೆ ಜೆ.ಆಲ್ಟರ್‌, ಮೈಕೆಲ್ ಹೊವನ್ ಹಾಗೂ ಚಾರ್ಲ್ಸ್‌ ಎಂ.ರೈಸ್ ಅವರಿಗೆ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಹೆಪಟೈಟಿಸ್ ಸಿ ವೈರಸ್‌ ಶಮನಗೊಳಿಸುವುದು ಈ ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಗಿದೆ. ಹೆಪಟೈಟಿಸ್‌ ಎ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘಕಾಲದವರೆಗೂ ಕಾಡುವ ಯಕೃತಿನ ಸಮಸ್ಯೆಗೆ ಪೂರ್ಣ ಪರಿಹಾರ ದೊರೆತಿರಲಿಲ್ಲ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಿಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ.‌

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು 7 ಕೋಟಿ ಹೆಪಟೈಟಿಸ್‌ ಪ್ರಕರಣಗಳಿದ್ದು, ಪ್ರತಿ ವರ್ಷ ಹೆಪಟೈಟಿಸ್‌ ವೈರಸ್‌ನಿಂದಾಗಿ 4 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ದೀರ್ಘಾವಧಿ ಅವರೆಗೂ ಕಾಡುವ ಹೆಪಟೈಟಿಸ್‌ ಕಾಯಿಲೆಯು ಕ್ಯಾನ್ಸರ್‌ ಮತ್ತು ಯಕೃತ್ತಿನ ಸಮಸ್ಯೆ ಉಂಟು ಮಾಡುತ್ತದೆ.

ADVERTISEMENT

ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್‌ ಸ್ಪೀಡಿಶ್ ಕ್ರೊನಾ (ಅಂದಾಜು ₹8.22 ಕೋಟಿ) ಒಳಗೊಂಡಿರುತ್ತದೆ. ಕೊರೊನಾ ವೈರಸ್‌ ಸೋಂಕಿನಿಂದ ಇಡೀ ಜಗತ್ತು ಪರಿಣಾಮ ಎದುರಿಸುತ್ತಿರುವ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ವಿಶೇಷ ಗಮನ ಸೆಳೆದಿದೆ.

ಅಕ್ಟೋಬರ್‌ 12ರ ವರೆಗೂ ಆರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿರುವವರಿಗೆ ನೊಬೆಲ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸಾಧನೆ ತೋರಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.