ADVERTISEMENT

ಕಿಮ್‌ ಆರೋಗ್ಯ: ತಿಳಿಯದ ಸತ್ಯ

ಉತ್ತರ ಕೊರಿಯಾ ಸಂಸ್ಥಾಪಕರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಗೈರು: ಹೆಚ್ಚಿದ ವದಂತಿ

ರಾಯಿಟರ್ಸ್
Published 22 ಏಪ್ರಿಲ್ 2020, 20:17 IST
Last Updated 22 ಏಪ್ರಿಲ್ 2020, 20:17 IST
ಕಿಮ್‌ ಜಾಂಗ್‌ ಉನ್‌
ಕಿಮ್‌ ಜಾಂಗ್‌ ಉನ್‌   
""

ಸೋಲ್‌: ಉತ್ತರ ಕೊರಿಯಾದ ಪರಮೋಚ್ಛ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿವಿಧ ರೀತಿಯ ಉಹಾಪೋಹಗಳು ಹಬ್ಬಿವೆ. ಹೃದಯ ಶಸ್ತ್ರಚಿಕಿತ್ಸೆ ಬಳಿಕ 36 ವರ್ಷದ ಕಿಮ್‌ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.

ಆದರೆ, ಕಿಮ್‌ ಎಲ್ಲಿದ್ದಾರೆ ಎನ್ನುವ ಬಗ್ಗೆ ಅಥವಾ ಆರೋಗ್ಯ ಸ್ಥಿತಿ ಕುರಿತು ಉತ್ತರ ಕೊರಿಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಯಾವುದೇ ರೀತಿಯ ವರದಿಗಳನ್ನು ಪ್ರಕಟಿಸಿಲ್ಲ. ಎಂದಿನಂತೆ ಕಿಮ್‌ ಸಾಧನೆ ಕುರಿತ ವರದಿಗಳನ್ನು ಪ್ರಕಟಿಸಿದೆ.

ಏಪ್ರಿಲ್‌ 15ರಂದು ಉತ್ತರ ಕೊರಿಯಾ ಸಂಸ್ಥಾಪಕ ಮತ್ತು ಕಿಮ್‌ ಅವರ ತಾತ ದಿವಂಗತ ಕಿಮ್‌ ಸಂಗ್‌ ಅವರ ಜನ್ಮದಿನಾಚರಣೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಕಿಮ್‌ ಪಾಲ್ಗೊಂಡಿರಲಿಲ್ಲ. ಇದೇ ಪ್ರಥಮ ಬಾರಿ ಈ ಕಾರ್ಯಕ್ರಮದಿಂದ ಕಿಮ್ ದೂರ ಉಳಿದಿದ್ದರಿಂದ ಊಹಾಪೋಹಗಳು ಹಬ್ಬಿದವು.

ADVERTISEMENT

ಅತಿಯಾದ ಧೂಮಪಾನ ಮಾಡುತ್ತಿದ್ದ ಕಿಮ್‌, ಸ್ಥೂಲಕಾಯ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹೀಗಾಗಿ, ಮೌಂಟ್‌ ಮ್ಯೊಹ್ಯಾಂಗ್‌ನ ರೆಸಾರ್ಟ್‌ವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಲ್‌ನ ಜಾಲತಾಣವೊಂದು ವರದಿ ಮಾಡಿತ್ತು.

ಕಿಮ್‌ ಆರೋಗ್ಯ ಕುರಿತ ವರದಿಗಳನ್ನು ದಕ್ಷಿಣ ಕೊರಿಯಾ ಮತ್ತು ಚೀನಾ ತಳ್ಳಿ ಹಾಕಿವೆ. 2011ರಲ್ಲಿ ಹೃದಯಾಘಾತದಿಂದ ಕಿಮ್‌ ಅವರ ತಂದೆ ಕಿಮ್‌ ಜಾಂಗ್‌ ನಿಧನರಾಗಿದ್ದರು. ಬಳಿಕ, ಕಿಮ್‌ ಅಧಿಕಾರ ಸ್ವೀಕರಿಸಿದ್ದರು.

ಕಿಮ್‌ ಯೊ ಜಾಂಗ್

ಕಿಮ್‌ ಸಹೋದರಿ ಉತ್ತರಾಧಿಕಾರಿ?

ಕಿಮ್‌ ಅವರ ಮಕ್ಕಳು ಇನ್ನೂ ಚಿಕ್ಕವರಿದ್ದಾರೆ. ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೀಗಾಗಿ, ಕಿಮ್‌ ನಂತರ ಅವರಿಗೆ ನಿಷ್ಠೆಯಿಂದ ಇರುವ ಅವರ ಸಹೋದರಿ ಕಿಮ್‌ ಯೊ ಜಾಂಗ್‌ ಅಧಿಕಾರ ಸ್ವೀಕರಿಸಬಹುದು ಎನ್ನಲಾಗಿದೆ.

ದಕ್ಷಿಣ, ಕೊರಿಯಾ, ಚೀನಾ ಮತ್ತು ಅಮೆರಿಕ ಜತೆಗಿನ ಸಭೆಗಳಲ್ಲಿ ಕಿಮ್‌ ಜತೆಗೆ ಕಿಮ್‌ ಯೊ ಜಾಂಗ್‌ ಸಹ ಭಾಗವಹಿಸಿದ್ದರು. ಹೀಗಾಗಿ, ಸಹಜವಾಗಿಯೇ ಇವರೇ ಉತ್ತರಾಧಿಕಾರಿಯಾಗುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.