ADVERTISEMENT

ಹೆಚ್ಚುತ್ತಿರುವ ಕೋವಿಡ್: ಉತ್ತರ ಕೊರಿಯಾದಲ್ಲಿ 15 ಮಂದಿ ಸಾವು

ಹೆಚ್ಚುತ್ತಿರುವ ಕೋವಿಡ್: ಮೃತರ ಸಂಖ್ಯೆ 42ಕ್ಕೆ ಏರಿಕೆ

ಏಜೆನ್ಸೀಸ್
Published 15 ಮೇ 2022, 19:13 IST
Last Updated 15 ಮೇ 2022, 19:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸೋಲ್: ಉತ್ತರ ಕೊರಿಯಾದಲ್ಲಿ ಕೋವಿಡ್‌ನಿಂದ ಭಾನುವಾರ 15 ಮಂದಿ ಮೃತಪಟ್ಟಿದ್ದಾರೆ.ಸಾವಿರಾರು ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ದೇಶ ಕೋವಿಡ್‌ ಮುಕ್ತವಾಗಿದೆ ಎಂದು ಪ್ರತಿಪಾದಿಸಿದ್ದ ಉತ್ತರ ಕೊರಿಯಾ ಕಳೆದ ಗುರುವಾರ ಪ್ರಥಮ ಬಾರಿಗೆ ಮೊದಲ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಪ್ರಕಟಿಸಿತ್ತು. ಹಿಂದೆಯೇ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿತ್ತು.

ಕೊರಿಯಾದ ಅಧಿಕೃತ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ಪ್ರಕಾರ, ಭಾನುವಾರವೇ 2,96,180 ಮಂದಿ ಸೋಂಕಿತರಾಗಿದ್ದು, ಸೋಂಕಿತರ ಸಂಖ್ಯೆ 8,20,620ಕ್ಕೆ ಏರಿದೆ. ಭಾನುವಾರ 15 ಮಂದಿ ಸತ್ತಿದ್ದು, ಮೃತರ ಸಂಖ್ಯೆ 42ಕ್ಕೆ ಏರಿದೆ.

ADVERTISEMENT

ಶಂಕಿತ ಸೊಂಕು ಬಾಧಿತರನ್ನು ತಪಾಸಣೆಗೆ ಒಳಪಡಿಸಲು ಉತ್ತರ ಕೊರಿಯಾದಲ್ಲಿ ಅಗತ್ಯ ಕಿಟ್‌ಗಳು ಲಭ್ಯವಿಲ್ಲ ಎಂದು ಉತ್ತರ ಕೊರಿಯಾದ ಸೆಜೊಂಗ್ ಇನ್‌ಸ್ಟಿಟ್ಯೂಟ್‌ನ ತಜ್ಞ ಚಿಯೋಂಗ್ ಸಿಯೋಂಗ್ ಚಾಂಗ್ ಅಭಿಪ್ರಾಯಪಟ್ಟಿದ್ದಾರೆ.

ಶಾಂಘೈ: ವಾಣಿಜ್ಯ ಚಟುವಟಿಕೆ ಭಾಗಶಃ ಮುಕ್ತ

ತೈಪೆ (ಎ.ಪಿ): ಕೋವಿಡ್ ಸ್ಥಿತಿ ನಿಯಂತ್ರಣದಲ್ಲಿರುವ ಕಾರಣ ಚೀನಾದ ಶಾಂಘೈನಲ್ಲಿ ವಾಣಿಜ್ಯ ಚಟುವಟಿಕೆ ಸೋಮವಾರ ಭಾಗಶಃ ಮುಕ್ತವಾಗಲಿದ್ದು, ಸೂಪರ್‌ ಮಾರ್ಕೆಟ್‌, ರೆಸ್ಟೋರೆಂಟ್‌ ತೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನಸಿ ಮಳಿಗೆ, ಮಾಲ್‌ಗಳು, ಔಷಧ ಮಳಿಗೆಗಳಿಗೆ ಅವಕಾಶ ಇರಲಿದೆ. ಆದರೆ, ಜನದಟ್ಟಣೆ ನಿಯಂತ್ರಣಕ್ಕಾಗಿ ನಿರ್ಬಂಧಗಳು ಮುಂದುವರಿಯಲಿವೆ ಎಂದು ಶಾಂಘೈನ ಉಪ ಮೇಯರ್ ಚೆನ್‌ ತೊಂಗ್ ತಿಳಿಸಿದ್ದಾರೆ. ಚೀನಾದಲ್ಲಿ ಭಾನುವಾರ 1,718 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.