ADVERTISEMENT

ಉತ್ತರ ಕೊರಿಯಾದ ವಿರುದ್ಧ ಭದ್ರತಾ ಮೈತ್ರಿಕೂಟ: ಜಪಾನ್, ಅಮೆರಿಕಗೆ ರಷ್ಯಾ ಎಚ್ಚರಿಕೆ

ಪಿಟಿಐ
Published 13 ಜುಲೈ 2025, 12:47 IST
Last Updated 13 ಜುಲೈ 2025, 12:47 IST
<div class="paragraphs"><p>ಕಿಮ್‌ ಜಾಂಗ್‌ ಉನ್,&nbsp;ಸೆರ್ಗಿ ಲಾವ್ರೊವ್</p></div>

ಕಿಮ್‌ ಜಾಂಗ್‌ ಉನ್, ಸೆರ್ಗಿ ಲಾವ್ರೊವ್

   

ಸೋಲ್‌: ಉತ್ತರ ಕೊರಿಯಾದ ವಿರುದ್ಧ ಅಮೆರಿಕ, ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಒಟ್ಟಾಗಿ ಭದ್ರತಾ ಮೈತ್ರಿಕೂಟ ರೂಪಿಸಿರುವ ಬಗ್ಗೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿ, ಈ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ. 

ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಉತ್ತರ ಕೊರಿಯಾಗೆ ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ‘ ಉತ್ತರ ಕೊರಿಯಾ, ರಷ್ಯಾ ಅಥವಾ ಯಾವುದೇ ದೇಶವನ್ನಾಗಲಿ ಗುರಿಯಾಗಿಸುವ ಉದ್ದೇಶದಿಂದ ಭದ್ರತಾ ಮೈತ್ರಿ ಕೂಟ ಸ್ಥಾಪಿಸುವುದು ಸರಿಯಲ್ಲ. ಇದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ.

ADVERTISEMENT

ಅಲ್ಲದೇ, ‘ಉತ್ತರ ಕೊರಿಯಾ ಬಳಸುತ್ತಿರುವ ತಂತ್ರಜ್ಞಾನವು ಆ ದೇಶದ ವಿಜ್ಞಾನಿಗಳ ಪರಿಶ್ರಮದ ಪ್ರತಿಫಲವಾಗಿದೆ. ಅಣ್ವಸ್ತ್ರ ಯೋಜನೆಯ ಹಿಂದಿನ ಉತ್ತರ ಕೊರಿಯಾದ ಉದ್ದೇಶ, ಅಗತ್ಯ ಏನು ಎಂಬುದೂ ನಮಗೆ ತಿಳಿದಿದೆ. ನಾವು ಅದನ್ನು ಗೌರವಿಸುತ್ತೇವೆ’ ಎಂದೂ ಸೆರ್ಗಿ ಹೇಳಿದ್ದಾರೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಹಾಗೂ ವಿದೇಶಾಂಗ ಸಚಿವೆ ಚೋ ಸನ್‌ ಹುಯಿ ಅವರನ್ನೂ ಸೆರ್ಗಿ ಭೇಟಿಯಾಗಿ ಉಭಯ ರಾಷ್ಟ್ರಗಳ ಸಹಕಾರ ಅಭಿವೃದ್ಧಿ ಕುರಿತಂತೆ ಮಾತುಕತೆ ನಡೆಸಿದ್ದಾಗಿಯೂ ತಿಳಿಸಿದ್ದಾರೆ.

ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಯೋಜನೆಗಳನ್ನು ಚುರುಕುಗೊಳಿಸಿರುವ ಕಾರಣ ಅಮೆರಿಕ, ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಒಟ್ಟಾಗಿ ಸೇನಾ ಕವಾಯತು ನಡೆಸುತ್ತಿವೆ. ಅಮೆರಿಕದ ಅಣ್ವಸ್ತ್ರ ಸಜ್ಜಿತ ಬಾಂಬರ್‌ಗಳನ್ನು ಬಳಸಿ ಇತ್ತೀಚೆಗಷ್ಟೇ ವೈಮಾನಿಕ ಕವಾಯತು ನಡೆಸಲಾಗಿತ್ತು. ಬೆನ್ನಲ್ಲೇ ರಷ್ಯಾ ಈ ಎಚ್ಚರಿಕೆ ಸಂದೇಶ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.