ADVERTISEMENT

ಸೋಂಕು ನಿಯಂತ್ರಣ: ಉತ್ತರ ಕೊರಿಯಾದ ನಡೆ ಬಗ್ಗೆ ತಜ್ಞರ ಪ್ರಶ್ನೆ

ಏಜೆನ್ಸೀಸ್
Published 20 ಏಪ್ರಿಲ್ 2020, 16:58 IST
Last Updated 20 ಏಪ್ರಿಲ್ 2020, 16:58 IST
ಉತ್ತರ ಕೊರಿಯಾದ ರಾಜಧಾನಿ ಪಿಂಗ್‌ಯಾಂಗ್‌ನ ಸರ್ಕಾರಿ ಕಟ್ಟಡದ ಮೇಲೆ ರಾರಾಜಿಸುತ್ತಿರುವ ಕಿಮ್ ಸಂಗ್ ಮತ್ತು ಕಿಮ್ ಜೊಂಗ್ ಅವರ ಚಿತ್ರಗಳು.
ಉತ್ತರ ಕೊರಿಯಾದ ರಾಜಧಾನಿ ಪಿಂಗ್‌ಯಾಂಗ್‌ನ ಸರ್ಕಾರಿ ಕಟ್ಟಡದ ಮೇಲೆ ರಾರಾಜಿಸುತ್ತಿರುವ ಕಿಮ್ ಸಂಗ್ ಮತ್ತು ಕಿಮ್ ಜೊಂಗ್ ಅವರ ಚಿತ್ರಗಳು.   

ಸೋಲ್‌: ‘ಇದು ಸುಳ್ಳು. ಪ್ರತಿ ವರ್ಷ, ಎಲ್ಲ ಕಾಲದಲ್ಲೂ ಒಂದಲ್ಲ ಒಂದು ಸೋಂಕು ವ್ಯಾಪಿಸಿದರೂ, ಯಾವುದೇ ಸೋಂಕು ಇಲ್ಲ ಎಂದು ಉತ್ತರ ಕೊರಿಯಾ ಹೇಳುತ್ತಲೇ ಬಂದಿದೆ’...

ಹೀಗೆತಮ್ಮ ಅನುಭವವನ್ನು ಅಸೋಸಿಯೇಟೆಡ್‌ ಪ್ರೆಸ್‌(ಎಪಿ) ಜೊತೆಗಿನ ಸಂದರ್ಶನದಲ್ಲಿ ಬಿಚ್ಚಿಟ್ಟವರು ಸಾರ್ಸ್‌ ಸೋಂಕು ಹರಡಿದ ಸಂದರ್ಭದಲ್ಲಿ ಉತ್ತರ ಕೊರಿಯಾದಲ್ಲಿ ವೈದ್ಯರಾಗಿದ್ದ ಚೋಯ್‌ ಜಂಗ್‌ ಹುನ್‌.ವಿಶ್ವದಾದ್ಯಂತ ಕೊರೊನಾ ವೈರಸ್‌ ಸೋಂಕು ವ್ಯಾಪಿಸಿದ್ದರೂ, ತಮ್ಮ ರಾಷ್ಟ್ರದಲ್ಲಿ ಒಂದೇ ಒಂದು ಸೋಂಕಿನ ಪ್ರಕರಣಗಳು ಇಲ್ಲ ಎಂದು ಉತ್ತರ ಕೊರಿಯಾ ಹೇಳುತ್ತಿದೆ.

‘ಸಾರ್ಸ್‌ ಸೋಂಕು ವ್ಯಾಪಿಸಿದಾಗ ನಮ್ಮಲ್ಲಿ ಪರೀಕ್ಷಾ ಕಿಟ್‌ಗಳೇ ಇರಲಿಲ್ಲ. ವ್ಯಕ್ತಿ ಸತ್ತರೂ ಆತನಿಗೆ ಸೋಂಕು ಇತ್ತೆ ಎನ್ನುವುದನ್ನೂ ಪತ್ತೆಹಚ್ಚಲು ಆಗುತ್ತಿರಲಿಲ್ಲ. ಯಾರನ್ನು ಕ್ವಾರಂಟೈನ್‌ ಮಾಡಬೇಕು ಎನ್ನುವುದನ್ನು ತಿಳಿಸಲು ಅಗತ್ಯವಾದ ಆರೋಗ್ಯ ಪರೀಕ್ಷಾ ಉಪಕರಣಗಳೇ ಇರಲಿಲ್ಲ. ಸೋಂಕು ಪತ್ತೆಯಾದರೂ ಅದನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡಬೇಕು ಎನ್ನುವ ಸೂಚನೆಯೂ ಇರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಹುನ್‌. 2012ರಲ್ಲಿ ಹುನ್‌ ಉತ್ತರ ಕೊರಿಯಾ ತೊರೆದು ದಕ್ಷಿಣ ಕೊರಿಯಾದಲ್ಲಿ ಬಂದು ನೆಲೆಸಿದ್ದಾರೆ.

ADVERTISEMENT

ವೈರಸ್‌ನ ಮೂಲವಾದಚೀನಾದೊಂದಿಗೆ ಗಡಿ ಹಂಚಿಕೊಳ್ಳುವ ಉತ್ತರ ಕೊರಿಯಾದಲ್ಲಿ ಸೋಂಕು ವ್ಯಾಪಿಸದೇ ಇರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ರಾಷ್ಟ್ರದೊಳಗಿನ ಮಾಹಿತಿ ಸೋರಿಕೆಯಾಗದಂತೆ ನಿಯಂತ್ರಣವನ್ನು ಉತ್ತರ ಕೊರಿಯಾ ಹೊಂದಿದೆ. ಕಠಿಣ ನಿರ್ಬಂಧಗಳೇ ಸೋಂಕು ವ್ಯಾಪಿಸದಂತೆ ತಡೆದಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನವರಿಯಲ್ಲೇ ಉತ್ತರ ಕೊರಿಯಾ ಚೀನಾದೊಂದಿಗಿನ ಗಡಿಯನ್ನು ಮುಚ್ಚಿದೆ. ಸಾವಿರಾರು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಿದೆ. ಸೋಂಕಿನಿಂದ ಹಲವರು ಮೃತಪಟ್ಟಿದ್ದಾರೆ ಎಂದು ಸೋಲ್‌ನಲ್ಲಿರುವ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ತಿಳಿಸಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇಲ್ಲ ಎಂದು ಎಪಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.