ADVERTISEMENT

ಶಸ್ತ್ರಚಿಕಿತ್ಸೆ ನಂತರ ಅಪಾಯದಲ್ಲಿ ಕಿಮ್‌ ಜಾಂಗ್‌ ಉನ್‌?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 4:24 IST
Last Updated 21 ಏಪ್ರಿಲ್ 2020, 4:24 IST
   

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಅಪಾಯದಲ್ಲಿದ್ದಾರೆ. ಈ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಅಲ್ಲಿನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಏಪ್ರಿಲ್‌ 15ರಂದು ಕಿಮ್‌ ಜಾಂಗ್‌ ಉನ್‌ ಅವರ ಅಜ್ಜ, ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್‌ ಸುಂಗ್‌ ಅವರ ಜನ್ಮಾಚರಣೆ ನಡೆದಿತ್ತು. ಉತ್ತರ ಕೊರಿಯಾದ ಮಟ್ಟಿಗೆ ಮಹತ್ವದ ಆಚರಣೆಯಾದ ಈ ಕಾರ್ಯಕ್ರಮಕ್ಕೆ ಕಿಮ್‌ ಗೈರಾಗಿದ್ದರು. ಇದು ಅವರ ಸೌಖ್ಯದ ಬಗ್ಗೆ ಊಹಾಪೋಹಗಳೇಳಲು ಕಾರಣವಾಗಿದ್ದವು. ಈ ಕಾರ್ಯಕ್ರಮಕ್ಕೂ ನಾಲ್ಕು ದಿನಗಳ ಮೊದಲು ಅವರು ಸರ್ಕಾರಿ ಸಭೆಯೊಂದರಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಅವರು ಈ ವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಈ ಕುರಿತು ಅಮೆರಿಕದ ಮತ್ತೊಬ್ಬ ಅಧಿಕಾರಿ ಸಿಎನ್‌ಎನ್‌ ಜೊತೆಗೆ ಮಾತನಾಡಿದ್ದು, ‘ ಕಿಮ್‌ ಸೌಖ್ಯದ ವಿಚಾರವಾಗಿ ಲಭ್ಯವಾಗಿರುವ ಮಾಹಿತಿ ದೃಢ. ಆದರೆ, ಅದರ ತೀವ್ರತೆಯನ್ನು ಹೇಳುವುದು ಕಷ್ಟ,’ ಎಂದಿದ್ದಾರೆ.

ADVERTISEMENT

ಉತ್ತರ ಕೊರಿಯಾದ ಬೆಳವಣಿಗೆಗಳ ಕುರಿತು ಸುದ್ದಿ ಬಿತ್ತರಿಸುವ ದಕ್ಷಿಣ ಕೊರಿಯಾದ ಆನ್‌ಲೈನ್‌ ಸುದ್ದಿ ಸಂಸ್ಥೆ ‘ಡೈಲಿ ಎನ್‌ಕೆ’ ವರದಿಯ ಪ್ರಕಾರ, ಕಿಮ್‌ ಏಪ್ರಿಲ್‌ 14ರಂದು ಅವರು ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

‘ಅತಿಯಾದ ಧೂಮಪಾನ, ಸ್ಥೂಲಕಾಯ, ಅಧಿಕ ಕಾರ್ಯದೊತ್ತಡಗಳಿಂದಾಗಿ ಕಿಮ್‌ಗೆ ಹೃದಯದ ಸಮಸ್ಯೆ ಎದುರಾಗಿದ್ದು, ಇದಕ್ಕಾಗಿಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ,’ ಎಂದು ವರದಿ ಮಾಡಲಾಗಿದೆ.

ಪತ್ನಿ ರೀ ಸೊಲ್‌ ಜು ಅವರೊಂದಿಗೆ ಕಿಮ್‌ ಜಾಂಗ್‌ ಉನ್‌

ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಕಿಮ್‌ಗೆ ಹ್ಯಾಂಗ್‌ಸನ್‌ ಪ್ರಾಂತ್ಯದ ಬಂಗಲೆಯಲ್ಲಿ ಶುಶ್ರೂಷೆ ನಡೆಯುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಎನ್ಎನ್‌ ವರದಿ ಮಾಡಿದೆ.

ಕಿಮ್‌ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದ ನಂತರ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದ ಹೆಚ್ಚಿನವರು ಏಪ್ರಿಲ್ 19 ರಂದು ಪ್ಯೊಂಗ್ಯಾಂಗ್‌ಗೆ ಮರಳಿದ್ದಾರೆ. ಕೆಲವರು ಮಾತ್ರ ಕಿಮ್‌ ಬಳಿ ಉಳಿದಿದ್ದು, ಅವರ ಆರೈಕೆಯಲ್ಲಿ ತೊಡಗಿದೆ ಎಂದು ವೆಬ್‌ಸೈಟ್‌ ವರದಿ ಮಾಡಿದೆ ಎಂದು ಹೇಳಲಾಗಿದೆ.

ಆದರೆ, ಈ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಉತ್ತರ ಕೊರಿಯಾ ತನ್ನ ನಾಯಕನ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳನ್ನು ಅತ್ಯಂತ ರಹಸ್ಯವಾಗಿಟ್ಟಿದೆ. ಅತ್ಯಂತ ನಿಗಾ ವಹಿಸಿ, ಗೌಪ್ಯವಾಗಿ ಕಿಮ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.