ADVERTISEMENT

ಕೊರೊನಾ ವೈರಸ್‌ ಸೆರೆ ಹಿಡಿದು ಕೊಲ್ಲುವ 'ಏರ್‌ಫಿಲ್ಟರ್‌’

ಶಾಲೆ, ಆಸ್ಪತ್ರೆ, ಆರೋಗ್ಯ ಕೇಂದ್ರಗಳು, ವಿಮಾನಗಳಲ್ಲಿ ಅಳವಡಿಸುವ ಉಪಕರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 13:09 IST
Last Updated 8 ಜುಲೈ 2020, 13:09 IST
ಪ್ರಾತಿನಿಧಿಕ  ಚಿತ್ರ
ಪ್ರಾತಿನಿಧಿಕ ಚಿತ್ರ    

ಹ್ಯೂಸ್ಟನ್‌: ಕೊರೊನಾ ವೈರಸ್‌ ನಿಯಂತ್ರಿಸಲು ಇಲ್ಲಿನ ವಿಜ್ಞಾನಿಗಳು ವಿನೂತನವಾದ ‘ಏರ್‌ಫಿಲ್ಟರ್‌’ ಅಭಿವೃದ್ಧಿಪಡಿಸಿದ್ದಾರೆ.

ವೈರಸ್‌ ಅನ್ನು ಸೆರೆ ಹಿಡಿದು ತಕ್ಷಣವೇ ನಿಷ್ಕಿಯಗೊಳಿಸುವ ಸಾಮರ್ಥ್ಯವನ್ನು ಈ ಉಪಕರಣ ಹೊಂದಿದೆ. ಹೀಗಾಗಿಯೇ ಇದಕ್ಕೆ ‘ಕ್ಯಾಚ್‌ ಆಂಡ್‌ ಕಿಲ್‌’ ಏರ್‌ ಫಿಲ್ಟರ್‌ ಎಂದು ಕರೆಯಲಾಗಿದೆ.

ಶಾಲೆ, ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳು, ವಿಮಾನಗಳು ಸೇರಿದಂತೆ ಕಚೇರಿ ರೀತಿಯ ನಾಲ್ಕು ಗೋಡೆಗಳಿರುವ ವಾತಾವರಣದಲ್ಲಿ ವೈರಸ್‌ ಹಬ್ಬುವುದನ್ನು ನಿಯಂತ್ರಿಸಲು ಈ ಉಪಕರಣ ಸಹಕಾರಿಯಾಗಿದೆ ಎಂದು ಯುನಿವರ್ಸಿಟಿ ಆಫ್‌ ಹ್ಯೂಸ್ಟನ್‌ನ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ADVERTISEMENT

ಈ ಉಪಕರಣವು ಶೇಕಡ 99.8ರಷ್ಟು ಕೊರೊನಾ, ಸಾರ್ಸ್‌ ವೈರಸ್‌ ಸಾಯಿಸಿರುವ ಅಧ್ಯಯನ ವರದಿಯನ್ನು ‘ಮೆಟರಿಯಲ್ಸ್‌ ಟುಡೆ ಫಿಸಿಕ್ಸ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ನಿಕ್ಕಲ್‌ ಲೋಹದಿಂದ ಈ ಉಪಕರಣವನ್ನು ತಯಾರಿಸಲಾಗಿದೆ. ಆಂಥ್ರಾಕ್ಸ್‌ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೇರಿಯಮ್‌ ಬ್ಯಾಸಿಲ್ಲಸ್‌ ಆಂಥ್ರಾಸಿಸ್‌ ವೈರಾಣುಗಳನ್ನು ಶೇಕಡ 99.9ರಷ್ಟು ಸಾಯಿಸುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

‘ಕೊರೊನಾ ವೈರಸ್‌ ಹಬ್ಬದಂತೆ ವಿಮಾನ ನಿಲ್ದಾಣಗಳು, ವಿಮಾನಗಳು, ಕಚೇರಿ ಕಟ್ಟಡಗಳು, ಶಾಲೆಗಳು ಮತ್ತು ಹಡಗುಗಳಲ್ಲಿ ಈ ಏರ್‌ಫಿಲ್ಟರ್‌ ಉಪಯೋಗಿಸಬಹುದು’ ಎಂದು ಈ ಬಗ್ಗೆ ಅಧ್ಯಯನ ನಡೆಸಿರುವ ಅಮೆರಿಕ ಯುನಿವರ್ಸಿಟಿ ಆಫ್‌ ಹ್ಯೂಸ್ಟನ್‌ನ ಝಿಫೆಂಗ್‌ ರೆನ್‌ ವಿವರಿಸಿದ್ದಾರೆ.

‘ಕೊರೊನಾ ವೈರಸ್‌ 70 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶದಲ್ಲಿ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ. ಆದರೂ, ಫಿಲ್ಟರ್‌ ತಾಪಮಾನವನ್ನು 200 ಡಿಗ್ರಿ ಸೆಲ್ಸಿಯಸ್‌ಯಷ್ಟು ಬಿಸಿ ಮಾಡಲಾಗುತ್ತದೆ. ಇದರಿಂದ, ತಕ್ಷಣವೇ ವೈರಸ್ ಸಾಯುತ್ತದೆ’ ಎಂದು ವಿವರಿಸಿದ್ದಾರೆ.

‘ಗಾಳಿಯಲ್ಲಿ ವೈರಸ್‌ ಸುಮಾರು ಮೂರು ಗಂಟೆಗಳ ಕಾಲ ಇರುತ್ತದೆ. ಹೀಗಾಗಿ, ಫಿಲ್ಟರ್‌ಗಳಿದ್ದರೆ ತಕ್ಷಣವೇ ವೈರಸ್‌ ಅನ್ನು ಹಿಡಿದು ಸಾಯಿಸುತ್ತದೆ. ಎಲ್ಲ ರಾಷ್ಟ್ರಗಳಲ್ಲಿ ಈಗ ಮತ್ತೆ ವ್ಯಾಪಾರ–ವಹಿವಾಟಿಗೆ ಚಾಲನೆ ನೀಡಿದೆ. ಹೀಗಾಗಿ, ಹವಾನಿಯಂತ್ರಿತ ಸ್ಥಳಗಳಲ್ಲಿ ವೈರಸ್‌ ನಿಯಂತ್ರಿಸುವುದು ತುರ್ತು ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

‘ಕಚೇರಿಗಳಲ್ಲಿ ಗಾಳಿಯನ್ನು ಶುದ್ಧಗೊಳಿಸಲು ಅನುಕೂಲವಾಗುವ ಉಪಕರಣವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಈ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.