ADVERTISEMENT

ಚೀನಾ–ಭಾರತ ದ್ವಿಪಕ್ಷೀಯ ಮಾತುಕತೆ ಆರಂಭಿಸಬೇಕು: ಚೀನಾ ಉಪಾಧ್ಯಕ್ಷ ಹನ್‌ ಚುಂಗ್‌

‘ವಿಶೇಷ ಪ್ರತಿನಿಧಿಗಳ ಮಾತುಕತೆ’ ಸಭೆಯಲ್ಲಿ ಚೀನಾದ ಉಪಾಧ್ಯಕ್ಷ ಹೇಳಿಕೆ

ಪಿಟಿಐ
Published 18 ಡಿಸೆಂಬರ್ 2024, 16:00 IST
Last Updated 18 ಡಿಸೆಂಬರ್ 2024, 16:00 IST
 ಬೀಜಿಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಬುಧವಾರ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
 ಬೀಜಿಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಬುಧವಾರ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ಬೀಜಿಂಗ್‌ : ‘ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಮತ್ತೊಮ್ಮೆ ಹಳಿಗೆ ತರಲು ಎರಡೂ ದೇಶಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಇನ್ನು ಮುಂದೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು’ ಎಂದು ಚೀನಾ ಉಪಾಧ್ಯಕ್ಷ ಹನ್‌ ಚುಂಗ್‌ ಹೇಳಿದ್ದಾರೆ.

ಭಾರತ–ಚೀನಾದ ‘ವಿಶೇಷ ಪ್ರತಿನಿಧಿಗಳ ಮಾತುಕತೆ’ 2019ರಲ್ಲಿ ದೆಹಲಿಯಲ್ಲಿ ನಡೆದಿತ್ತು. ಆ ಬಳಿಕ ಸಭೆಯು ನಡೆದಿರಲಿಲ್ಲ. ಬುಧವಾರ ಚೀನಾದಲ್ಲಿ 23ನೇ ‘ವಿಶೇಷ ಪ್ರತಿನಿಧಿಗಳ ಮಾತುಕತೆ’ ಸಭೆ ನಡೆಯಿತು. ಭಾರತವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಪ್ರತಿನಿಧಿಸಿದ್ದರು. ಡೊಭಾಲ್‌ ಅವರು ಬುಧವಾರ ಹನ್‌ ಚುಂಗ್‌ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ.

ಮಾತುಕತೆ ವೇಳೆ, ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ಮುಂದಿನ ವರ್ಷ 75 ವರ್ಷವಾಗುತ್ತದೆ ಎನ್ನುವುದನ್ನು ಉಲ್ಲೇಖಿಸಿದ ಹನ್‌ ಚುಂಗ್‌, ‘ರಾಜಕೀಯವಾಗಿ ಎರಡೂ ದೇಶಗಳು ಪರಸ್ಪರ ನಂಬಿಕೆ ಬೆಳೆಸಿಕೊಳ್ಳಬೇಕು. ಆರ್ಥಿಕತೆ, ವ್ಯಾಪಾರ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಎರಡೂ ದೇಶಗಳ ನಡುವಿನ ಕೊಡುಕೊಳ್ಳುವಿಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಐದು ವರ್ಷಗಳ ಬಳಿಕ ಎರಡೂ ದೇಶಗಳ ನಡುವೆ ಈ ಮಾತುಕತೆ ನಡೆಯುತ್ತಿರುವುದು ಪ್ರಮುಖವಾದ ಬೆಳವಣಿಗೆ. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಪರಸ್ಪರರಿಗೆ ಅನುಕೂಲವಾಗುವಂಥ ಸಹಕಾರವನ್ನು ವಿಸ್ತರಿಸಿಕೊಳ್ಳಲು ಭಾರತ ಇಚ್ಛಿಸುತ್ತದೆ’ ಎಂದು ಅಜಿತ್‌ ಡೊಭಾಲ್‌ ಅಭಿಪ್ರಾಯಪಟ್ಟರು.

2020ರಲ್ಲಿ ಎಲ್‌ಎಸಿ ಬಳಿಯ ಗಾಲ್ವಾನ್‌ನಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಚೀನಾ–ಭಾರತದ ಸಂಬಂಧ ಹಳಸಿತ್ತು. 2024ರ ಜೂನ್‌ನಲ್ಲಿ ಭಾರತದಿಂದ ಚೀನಾ ಸೇನೆಯು ಹಂತ ಹಂತವಾಗಿ ವಾಪಾಸಾಗಿತ್ತು.

‘ಗಡಿ ವಿಚಾರಕ್ಕೆ ಅಗತ್ಯ ಮಹತ್ವ ನೀಡಿ’

‘ಚೀನಾ ಹಾಗೂ ಭಾರತವು ಗಡಿ ವಿಷಯಕ್ಕೆ ದ್ವಿಪಕ್ಷೀಯ ಸಂಬಂಧದಲ್ಲಿ ‘ಅಗತ್ಯ ಮಹತ್ವ’ ನೀಡಬೇಕು ಎಂದು ‘ವಿಶೇಷ ಪ್ರತಿನಿಧಿಗಳ ಮಾತುಕತೆ’ ಸಭೆಯಲ್ಲಿ ಅಜಿತ್ ಡೊಭಾಲ್ ಅವರಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಹೇಳಿದ್ದಾರೆ’ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.  ‘ಗಡಿ ವಿಚಾರವಾಗಿ ಎದ್ದಿರುವ ಸಮಸ್ಯೆಗಳಿಗೆ ನ್ಯಾಯಯುತವಾದ ಹಾಗೂ ಎರಡೂ ದೇಶಗಳು ಒಪ್ಪಿಕೊಳ್ಳಬಹುದಾದ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪರಿಹಾರ ಸೂತ್ರ ಕಂಡುಕೊಳ್ಳುವ ಬಗ್ಗೆ ಬದ್ಧವಾಗಿರುವುದಾಗಿ ಎರಡೂ ದೇಶಗಳು ಹೇಳಿವೆ’ ಎಂದೂ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.