ADVERTISEMENT

ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸೋಂಕುಕಾರಕ ಓಮೈಕ್ರಾನ್: ಅಧ್ಯಯನ

ಪಿಟಿಐ
Published 16 ಡಿಸೆಂಬರ್ 2021, 11:12 IST
Last Updated 16 ಡಿಸೆಂಬರ್ 2021, 11:12 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಬೀಜಿಂಗ್; ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್, ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ, ರೋಗದ ತೀವ್ರತೆ ಅತ್ಯಂತ ಕಡಿಮೆ ಇದ್ದಂತೆ ತೋರುತ್ತಿದೆ ಎಂದು ಹಾಂಗ್‌ಕಾಂಗ್‌ನ ಹೊಸ ಅಧ್ಯಯನವೊಂದು ಹೇಳಿದೆ.

ಡೆಲ್ಟಾ ರೂಪಾಂತರ ತಳಿ ಮತ್ತು ಮೂಲ ವೈರಸ್ ಸಾರ್ಸ್–ಕೋವ್–2ಗೆ ಹೋಲಿಸಿದರೆ ಓಮೈಕ್ರಾನ್ ತಳಿಯು ಮಾನವನ ಶ್ವಾಸನಾಳಕ್ಕೆ 70 ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹಾಂಗ್‌ಕಾಂಗ್ ಸಂಶೋಧಕರ ತಂಡ ಹೇಳಿದೆ.

ಸೋಂಕಿತರಲ್ಲಿ ಗಂಭೀರ ಪರಿಣಾಮ ಉಂಟು ಮಾಡುತ್ತಿದ್ದ ಮೂಲ ವೈರಸ್‌ಗೆ ಹೋಲಿಸಿದರೆ ಓಮೈಕ್ರಾನ್‌ನಿಂದ ರೋಗದ ತೀವ್ರತೆ ಅತ್ಯಂತ ಕಡಿಮೆ ಇರುತ್ತದೆ ಎನ್ನುತ್ತಿದೆ ಅಧ್ಯಯನ.

ಸಾರ್ಸ್‌–ಕೋವ್–2ನ ಇತರೆ ರೂಪಾಂತರಗಳಿಗಿಂತ ಓಮೈಕ್ರಾನ್ ಹರಡುವಿಕೆ ಮತ್ತು ರೋಗದ ತೀವ್ರತೆಯಲ್ಲಿ ಏಕೆ ಭಿನ್ನವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಉಸಿರಾಟದ ಪ್ರದೇಶದ ಎಕ್ಸ್‌ ವಿವೊ ಕಲ್ಚರ್‌ಗಳನ್ನು ಬಳಸಿದ್ದಾರೆ.

ADVERTISEMENT

ಈ ವಿಧಾನದಲ್ಲಿ ಉಸಿರಾಟದ ಪ್ರದೇಶದ ವೈರಲ್ ರೋಗಗಳನ್ನು ಪತ್ತೆ ಮಾಡಲು ಶ್ವಾಸಕೋಶದ ಅಂಗಾಂಶವನ್ನು ಬಳಸಲಾಗುತ್ತದೆ.

ಈ ವಿಧಾನದ ಮೂಲಕ ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮೈಕಲ್ ಚಾನ್ ಚಿ ವಾಯ್ ಅವರ ತಂಡವು, ಓಮೈಕ್ರಾನ್ ತಳಿಯನ್ನು ಪ್ರತ್ಯೇಕಗೊಳಿಸಿ ಸಾರ್ಸ್–ಕೋವ್–2 ಲಕ್ಷಣಗಳ ಜೊತೆಗೆ ತುಲನಾತ್ಮಕ ಅಧ್ಯಯನ ಮಾಡಿದ್ದಾರೆ.

ಓಮೈಕ್ರಾನ್ ತಳಿಯು ಕೊರೊನಾ ಮೂಲ ತಳಿ ಮತ್ತು ಟೆಲ್ಟಾಗಿಂತಲೂ ಬಹು ಬೇಗ ಮಾನವನ ಶ್ವಾಸನಾಳದಲ್ಲಿ ರೂಪುಗೊಳ್ಳುವುದನ್ನು ತಂಡ ಪತ್ತೆಮಾಡಿದೆ.

ಸೋಂಕು ತಗುಲಿದ 24 ಗಂಟೆಗಳ ನಂತರ, ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರ ಮತ್ತು ಮೂಲ ವೈರಸ್‌ಗಿಂತಲೂ ಸುಮಾರು 70 ಪಟ್ಟು ಹೆಚ್ಚು ಬಾರಿ ಪುನರಾವರ್ತನೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಆದರೆ, ಓಮೈಕ್ರಾನ್ ತಳಿಯ ರೋಗದ ಪರಿಣಾಮವು ಇತರೆ ತಳಿಗಳಿಗಿಂತ 10 ಪಟ್ಟು ಕಡಿಮೆ ಇದೆ ಎಂದು ಅದು ಹೇಳಿದೆ.

‘ಮಾನವರಲ್ಲಿ ರೋಗದ ತೀವ್ರತೆಯನ್ನು ವೈರಸ್ ಪುನರಾವರ್ತನೆಯಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಆದರೆ, ಸೋಂಕಿಗೆ ಒಳಗಾದ ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ’ಎಂದು ಚಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಆದರೆ, ಹೆಚ್ಚು ಹೆಚ್ಚು ಜನರಿಗೆ ಹರಡುವ ಮೂಲಕ ಕಡಿಮೆ ರೋಗಕಾರಕ ಮತ್ತು ಹೆಚ್ಚು ಸಾಂಕ್ರಾಮಿಕವಾದ ವೈರಸ್ ಸಾವುಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂಬುದನ್ನು ಗಮನಿಸಬೇಕು’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.