ADVERTISEMENT

ಪಾಕ್ ಪ್ರಧಾನಿ ರಾಜೀನಾಮೆಗೆ ಆಗ್ರಹ; ದೇಶವ್ಯಾಪಿ ಪ್ರತಿಭಟನೆಗೆ ವಿಪಕ್ಷಗಳ ನಿರ್ಧಾರ

ಪಿಟಿಐ
Published 21 ಸೆಪ್ಟೆಂಬರ್ 2020, 5:57 IST
Last Updated 21 ಸೆಪ್ಟೆಂಬರ್ 2020, 5:57 IST
ಪಾಕಿಸ್ತಾನದ ವಿವಿಧ ವಿರೋಧಪಕ್ಷಗಳ ಸಭೆಯಲ್ಲಿ ಮೌಲಾನಾ ಫಜಲ್ ಉರ್ ರೆಹಮಾನ್ ಅವರು ನಿರ್ಣಯವನ್ನು ಓದಿದರು. ಮುಖಂಡ ಬಿಲಾವಲ್ ಭುಟ್ಟೊ ಜರ್ಧಾರಿ ಅವರೂ ಇದ್ದಾರೆ
ಪಾಕಿಸ್ತಾನದ ವಿವಿಧ ವಿರೋಧಪಕ್ಷಗಳ ಸಭೆಯಲ್ಲಿ ಮೌಲಾನಾ ಫಜಲ್ ಉರ್ ರೆಹಮಾನ್ ಅವರು ನಿರ್ಣಯವನ್ನು ಓದಿದರು. ಮುಖಂಡ ಬಿಲಾವಲ್ ಭುಟ್ಟೊ ಜರ್ಧಾರಿ ಅವರೂ ಇದ್ದಾರೆ   

ಇಸ್ಲಾಮಾಬಾದ್: ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದುಪಾಕಿಸ್ತಾನದ ಪ್ರಮುಖ ವಿರೋಧಪಕ್ಷಗಳು ಆಗ್ರಹಪಡಿಸಿವೆ. ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ಮೈತ್ರಿಕೂಟವನ್ನು ಸ್ಥಾಪಿಸಿವೆ.

ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಕುರಿತು ಚರ್ಚಿಸಲು ಭಾನುವಾರನಡೆದ ಸಭೆಯಲ್ಲಿ 26 ಅಂಶಗಳಿರುವ ಜಂಟಿ ನಿರ್ಣಯ ಕೈಗೊಳ್ಳಲಾಗಿದೆ. ಪಾಕಿಸ್ತಾನ ಫೀಪಲ್ಸ್ ಪಾರ್ಟಿ (ಪಿಪಿಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್), ಜಮಾಯಿತ್ ಉಲೆಮಾ ಇ ಇಸ್ಲಾಂ ಫಾಜಿಲ್ (ಜೆಯುಐ-ಎಫ್) ಮತ್ತು ಹಾಗೂ ಇತರೆ ಪಕ್ಷಗಳು ಸಭೆಯಲ್ಲಿದ್ದವು.

ಸರ್ವಪಕ್ಷಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಾಜಿಲ್ ಉರ್ ರೆಹಮಾನ್ ಅವರು ಈ ನಿರ್ಣಯವನ್ನು ಓದಿದರು. ಅಕ್ಟೋಬರ್ ತಿಂಗಳಿನಿಂದ ಆಡಳಿತರೂಡ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ವಿರುದ್ಧ ಜನಾಂದೋಲನವು ಆರಂಭವಾಗಲಿದೆ ಎಂದು ತಿಳಿಸಿದರು.

ADVERTISEMENT

ಪಾಕಿಸ್ತಾನ ಸರ್ಕಾರವು ಸ್ಥಿರವಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಪ್ರತಿಪಾದಿಸಿವೆ.'ಪಾಕಿಸ್ತಾನ ಸೇನೆ'ಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಸರ್ಕಾರದ ಆಂತರಿಕ ವಿಷಯದಲ್ಲಿ ಅತಿಯಾಗಿ ಹಸ್ತಕ್ಷೇಪ ನಡೆಯುತ್ತಿದೆ. ಇದು ದೇಶ ಮತ್ತು ಸಂಸ್ಥೆಗಳ ಸ್ಥಿರತೆಗೆ ಧಕ್ಕೆ ತರಲಿದೆ ಎಂದೂ ವ್ಯಾಖ್ಯಾನಿಸಿವೆ.

ನಿರ್ಣಯದ ಪ್ರಕಾರ, ಹಂತ, ಹಂತವಾಗಿಪ್ರತಿಭಟನೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ ನಲ್ಲಿನಾಲ್ಕೂಪ್ರಾಂತ್ಯಗಳಲ್ಲಿ ಜಾಥಾ, ಎರಡನೇ ಹಂತದಲ್ಲಿ ಡಿಸೆಂಬರ್ ನಲ್ಲಿ ದೇಶದಾದ್ಯಂತ ಪ್ರತಿಭಟನಾ ಸಭೆ ನಡೆಯಲಿವೆ. ಅಂತಿಮವಾಗಿ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್ ಗೆ ಜಾಥಾ ಹೊರಡಲಿದ್ದು, ಚಳವಳಿಯನ್ನು ತೀವ್ರಗೊಳಿಸಲಾಗುತ್ತದೆ.

ಪಾರದರ್ಶಕವಾದ ಕ್ರಮದಲ್ಲಿ ಮತ್ತೆ ಚುನಾವಣೆಯನ್ನು ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯನ್ನು ನಡೆಸಲು ಅಗತ್ಯ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ವಿರೋಧಪಕ್ಷಗಳು ಆಗ್ರಹಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.