ADVERTISEMENT

ಮೊದಲ ಮಹಾಯುದ್ಧ: ರಾಷ್ಟ್ರಗಳು 70, ಯೋಧರು 7 ಕೋಟಿ; 52 ತಿಂಗಳ ಹೋರಾಟ

ಏಜೆನ್ಸೀಸ್
Published 11 ನವೆಂಬರ್ 2018, 10:21 IST
Last Updated 11 ನವೆಂಬರ್ 2018, 10:21 IST
   

ಯಾವುದೋ ದೇಶದ ಭಾಗವಾಗಿ, ಇನ್ನಾವುದೋ ರಾಷ್ಟ್ರದಲ್ಲಿ ವಿದೇಶಿಯರೊಂದಿಗೆ ಜತೆಯಾಗಿ ಎದುರಾಳಿ ರಾಷ್ಟ್ರಗಳ ಯೋಧರೊಂದಿಗೆ ಹೋರಾಡಲು ಹೊರಟವರು ಕೋಟ್ಯಂತರ ಜನ. ಮನೆಯಿಂದ ಹೊರಟ, ಮಗ, ಗಂಡ, ತಂದೆಯನ್ನು ಕಾಯುತ್ತದಿನವೂ ಊರಂಚಿನ ದಾರಿವರೆಗೂ ದೃಷ್ಟಿ ಹಾಯಿಸಿಮರುಗುವುದು ಎಷ್ಟೋ ತಾಯಂದಿರ, ಹೆಂಡತಿ–ಮಕ್ಕಳ ನಿತ್ಯ ಅಭ್ಯಾಸವಾಗಿ ಹೋಗಿತ್ತು. 1914ರಿಂದ 1918ರವರೆಗೂ ನಡೆದ ಮೊದಲ ಮಹಾಯುದ್ಧ ಬೃಹತ್‌ ವಿನಾಶವನ್ನೇ ಸೃಷ್ಟಿಸಿತು.

ಸಾವಿಗೀಡಾದವರು, ಗಾಯಗೊಂಡವರು, ಗಂಡನನ್ನು ಕಳೆದುಕೊಂಡವರು, ಅನಾಥರಾದವರ ಸಂಖ್ಯೆಯ ಲೆಕ್ಕ ಇಟ್ಟವರು ಇಲ್ಲ. ಇತಿಹಾಸಕಾರರು, ಸಂಶೋಧಕರು 52 ತಿಂಗಳ ಯುದ್ಧದ ಲೆಕ್ಕವನ್ನು ಒಂದೊಂದು ರೀತಿ ತೆರೆದಿಡುತ್ತಾರೆ. ಎಎಫ್‌ಪಿ ಸುದ್ದಿ ಸಂಸ್ಥೆ ಯುದ್ಧದ ಸಮಯದ ಪ್ರಮುಖ ಪ್ರಕರಣಗಳ ಅಂದಾಜಿನೊಂದಿಗೆ ಅಂಕಿ–ಅಂಶ ಸಿದ್ಧಪಡಿಸಿದೆ.

ಅದು 70 ರಾಷ್ಟ್ರಗಳ ಯುದ್ಧ

ADVERTISEMENT

ಮೊದಲ ಮಹಾಯುದ್ಧದಲ್ಲಿ ಭಾಗಿಯಾದ 70ಕ್ಕೂ ಹೆಚ್ಚುರಾಷ್ಟ್ರಗಳ ಪೈಕಿಇನ್ನೂ ಅನೇಕ ರಾಷ್ಟ್ರಗಳು ಆರು ಆಡಳಿತ ಚುಕ್ಕಾಣಿಗಳಿಂದ ಸ್ವತಂತ್ರ್ಯ ಹೊಂದಿಲ್ಲ. ಆಸ್ಟ್ರಿಯಾ–ಹಂಗೇರಿ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ರಷ್ಯಾ ಹಾಗೂ ಓಟಮನ್‌ ಸಾಮ್ರಾಜ್ಯ ಮೊದಲ ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದವು.

ಹನ್ನೆರಡು ಸ್ವತಂತ್ರ ರಾಷ್ಟ್ರಗಳ ನಡುವೆ 1914ರಲ್ಲಿ ಪ್ರಾರಂಭವಾದ ಯುದ್ಧ, ನಂತರದ ದಿನಗಳಲ್ಲಿ ವಿಶ್ವದ ಬಹುಭಾಗವನ್ನು ಆವರಿಸಿಕೊಂಡಿತು. 1915ರಲ್ಲಿ ಇಟಲಿ ಹಾಗೂ 1917ರಲ್ಲಿ ಅಮೆರಿಕ ರಣರಂಗ ಪ್ರವೇಶಿಸಿದವು. ಯುದ್ಧದಲ್ಲಿ ಭಾಗಿಯಾದ ರಾಷ್ಟ್ರಗಳ ಜನಸಂಖ್ಯೆ 80 ಕೋಟಿ; ಅದು ವಿಶ್ವದ ಅಂದಿನ ಜನಸಂಖ್ಯೆಯ ಅರ್ಧದಷ್ಟು.

ಜಗತ್ತಿನಾದ್ಯಂತ 20 ರಾಷ್ಟ್ರಗಳು ಮಾತ್ರ ಸಂಘರ್ಷಗಳಿಗೆ ತಟಸ್ಥ ನಿಲುವು ತಾಳಿದ್ದವು. ಇವುಗಳಲ್ಲಿ ಹೆಚ್ಚಿನವು ಲ್ಯಾಟಿನ್ ಅಮೆರಿಕ ಅಥವಾ ಉತ್ತರ ಯುರೋಪ್‌ನ ರಾಷ್ಟ್ರಗಳು.

7 ಕೋಟಿ ಯುದ್ಧ ಪಡೆ

ಪ್ರಾರಂಭದಲ್ಲಿ 2 ಕೋಟಿ ಮಂದಿ ಯುದ್ಧ ಸಂಘರ್ಷಗಳಲ್ಲಿ ಭಾಗಿಯಾಗಿದ್ದರು. ವರ್ಷಗಳು ಉರುಳುತ್ತಿದ್ದಂತೆ ಹೋರಾಟದಲ್ಲಿ ಭಾಗಿಯಾದವರ ಸಂಖ್ಯೆ 7 ಕೋಟಿ ದಾಟಿತು. ಬ್ರಿಟಿಷ್‌ ಸಾಮ್ರಾಜ್ಯ ಪ್ರಮುಖವಾಗಿ ಭಾರತ ಸೇರಿದಂತೆ ಹಲವು ಭಾಗಗಳಿಂದ 90 ಲಕ್ಷ ಪುರುಷರನ್ನು ಯುದ್ಧಕ್ಕೆ ರವಾನಿಸಿತ್ತು.

ಫ್ರಾನ್ಸ್‌ನಿಂದ 80 ಲಕ್ಷ, ಜರ್ಮನಿಯ 1.3 ಕೋಟಿ ಮಂದಿ, ಆಸ್ಟ್ರಿಯಾ–ಹಂಗೇರಿಯ 90 ಲಕ್ಷ ಜನ, ಇಟಲಿಯ 60 ಲಕ್ಷ ಮಂದಿ ಹಾಗೂ ಅಮೆರಿಕದಿಂದ 40 ಲಕ್ಷ ಜನರನ್ನು ರಣರಂಗಕ್ಕೆ ಕಳುಹಿಸಿಕೊಡಲಾಗಿತ್ತು.

ಮಡಿದವರು 1 ಕೋಟಿಗೂ ಅಧಿಕ ಯೋಧರು

ಜರ್ಮನಿ ಮತ್ತು ರಷ್ಯಾದ ಯೋಧರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಾಪಾಯಕ್ಕೆ ಎದುರಾದರು. ಗಾಯಗೊಂಡವರು ಹಾಗೂ ಮೃತಪಟ್ಟವರ ಪೈಕಿ ಸುಮಾರು ಒಂದು ಕೋಟಿ ಯೋಧರು ಈ ಎರಡು ರಾಷ್ಟ್ರಗಳಿಗೆ ಸೇರಿದ್ದವರೇ ಆಗಿದ್ದರು. ಉಳಿದಂತೆ;

ರಾಷ್ಟ್ರ– ಮೃತಪಟ್ಟವರು– ಗಾಯಗೊಂಡವರು

* ರಷ್ಯಾ–20 ಲಕ್ಷ ಮಂದಿ– 50 ಲಕ್ಷ ಜನ

* ಜರ್ಮನಿ– 20 ಲಕ್ಷ– 42 ಲಕ್ಷ

* ಫ್ರಾನ್ಸ್‌– 14 ಲಕ್ಷ– 42 ಲಕ್ಷ

* ಆಸ್ಟ್ರಿಯಾ–ಹಂಗೇರಿ– 14 ಲಕ್ಷ– 36 ಲಕ್ಷ

* ಬ್ರಿಟನ್‌ ಮತ್ತು ಬ್ರಿಟಿಷ್‌ ಸಾಮ್ರಾಜ್ಯ– 9.60 ಲಕ್ಷ– 20 ಲಕ್ಷ

* ಇಟಲಿ– 6 ಲಕ್ಷ– 10 ಲಕ್ಷ

* ಓಟಮನ್‌ ಸಾಮ್ರಾಜ್ಯ– 8 ಲಕ್ಷ ಮಂದಿ ಸಾವು

* ಅಮೆರಿಕ– 1.17 ಲಕ್ಷ ಜನರ ಸಾವು

ಫ್ರೆಂಚ್‌ ಸೇನೆಗೆ 1914ರ ಆಗಸ್ಟ್‌ 22 ಕರಾಳ ದಿನ. ಒಂದೇ ದಿನದಲ್ಲಿ 27 ಸಾವಿರ ಮಂದಿ ಫ್ರೆಂಚ್‌ ಯೋಧರು ಯುದ್ಧದಲ್ಲಿ ಮೃತಪಟ್ಟರು. ಪಿರಂಗಿ ದಾಳಿಯಲ್ಲಿ ಶೇ 70ರಷ್ಟು ಮಂದಿ ಗಾಯಗೊಂಡರು. 1915, ಬೆಲ್ಜಿಯಂನಲ್ಲಿ ಜರ್ಮನ್‌ ಪಡೆ ವಿಷಕಾರಿ ಅನಿಲ ಪ್ರಯೋಗಿಸುವ ಮೂಲಕ ರಾಸಾಯಿಕ ದಾಳಿಗಳಿಗೆ ನಾಂದಿ ಹಾಡಿತು. ವಿಷಾನಿಲದಿಂದ ಸುಮಾರು 20 ಸಾವಿರ ಮಂದಿ ಪ್ರಾಣತೆತ್ತರು.

ಯುದ್ಧದ ಪರಿಣಾಮ ಬಲಿಯಾದ ಜನಸಾಮಾನ್ಯರ ಸಂಖ್ಯೆ ಅಂದಾಜಿಸುವುದೂ ಕಷ್ಟ. ಇತಿಹಾಸ ತಜ್ಞರು ಘಟನೆಗಳ ಆಧಾರದಲ್ಲಿ 50 ಲಕ್ಷದಿಂದ 1 ಕೋಟಿ ಜನರು ಮೃತಪಟ್ಟಿರಬಹುದೆಂದು ಅಂದಾಜಿಸುತ್ತಾರೆ.

60 ಲಕ್ಷ ಯುದ್ಧ ಖೈದಿಗಳು, ಯುರೋಪ್‌ನಾದ್ಯಂತ 1 ಕೋಟಿಯಷ್ಟು ನಿರಾಶ್ರಿತರು, ಗಂಡನನ್ನು ಕಳೆದುಕೊಂಡವರು 30 ಲಕ್ಷ ಮಂದಿ, 60 ಲಕ್ಷಕ್ಕೂ ಹೆಚ್ಚು ಜನ ಅನಾಥರಾದರು, ಆರ್ಥಿಕತೆ ಕುಸಿತ, ಸಾವಿರ ಕೋಟಿ ಪತ್ರಗಳು ಹಾಗೂ ಪ್ಯಾಕೇಜ್‌ಗಳ ವಿನಿಮಯ ನಡೆದಿತ್ತು ಎನ್ನಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.