ಮಾಸ್ಕೊ : ‘ಉಕ್ರೇನ್ ಸೇನೆಯು ಮಾಸ್ಕೊ ನಗರವನ್ನು ಗುರಿಯಾಗಿಸಿ ಭಾನುವಾರ ಮುಂಜಾನೆ ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ಒಬ್ಬರು ಗಾಯಗೊಂಡಿದ್ದು, ವಿಮಾನನಿಲ್ದಾಣವೊಂದರ ಕಾರ್ಯ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು’ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
‘ಇದು, ಕೀವ್ ಆಡಳಿತದ ಭಯೋತ್ಪಾದನಾ ದಾಳಿ ಕೃತ್ಯ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿದೆ. ‘ಒಟ್ಟು ಮೂರು ಡ್ರೋನ್ ದಾಳಿ ನಡೆದಿದೆ. ಇವುಗಳಲ್ಲಿ ಒಂದನ್ನು ಹೊಡೆದು ಉರುಳಿಸಲಾಗಿದೆ. ಉಳಿದ ಎರಡನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮಾಸ್ಕೊದ ಮೇಯರ್ ಸೆರ್ಗಯ್ ಸೊಬ್ಯಾನಿನ್ ಅವರು, ಡ್ರೋನ್ ದಾಳಿಯಿಂದ ಎರಡು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಒಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ನುಕೊವೊ ವಿಮಾನನಿಲ್ದಾಣದಿಂದ ಸುಮಾರು ಒಂದು ಗಂಟೆ ಕಾಲ ಒಂದೂ ವಿಮಾನ ಕಾರ್ಯಾರಂಭ ಮಾಡಿಲ್ಲ. ಅಲ್ಲದೆ, ರಷ್ಯಾದ ವಾಯುಮಾರ್ಗವನ್ನು ಕೆಲ ಕಾಲ ನಿರ್ಬಂಧಿಸಲಾಗಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.