ADVERTISEMENT

ಆಕ್ಸ್‌ಫರ್ಡ್ ಲಸಿಕೆ ಸುರಕ್ಷಿತ, ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕ: ವಿಜ್ಞಾನಿಗಳು

ಪಿಟಿಐ
Published 20 ಜುಲೈ 2020, 16:57 IST
Last Updated 20 ಜುಲೈ 2020, 16:57 IST
   

ಲಂಡನ್‌: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಯು ಸುರಕ್ಷಿತವಾಗಿದೆ ಮತ್ತು ದೇಹದೊಳಗೆ ಪ್ರಬಲ ರೋಗನಿರೋಧಕ ಪ್ರತಿಕ್ರಿಯೆಯನ್ನು ಸೃಷ್ಟಿ ಮಾಡುತ್ತದೆ ಎಂದು ವಿಜ್ಞಾನಿಗಳು ಸೋಮವಾರ ಘೋಷಿಸಿದ್ದಾರೆ.

ವಿಶ್ವದ 1.45 ಕೋಟಿಗೂ ಹೆಚ್ಚು ಜನರನ್ನು ಭಾದಿಸಿರುವ ಮಾರಣಾಂತಿಕ ಕಾಯಿಲೆಗೆ ತಯಾರಿಸಲಾಗುತ್ತಿರುವ ಈ ಲಸಿಕೆಯ ಮಾನವನ ಮೇಲಿನ ಮೊದಲ ಹಂತದ ಯಶಸ್ವಿ ಪ್ರಯೋಗದ (ಹ್ಯೂಮನ್‌ ಟ್ರಯಲ್‌) ಹಿನ್ನೆಲೆಯಲ್ಲಿ ವಿಜ್ಞಾನಗಳು ಈ ವಿಷಯ ತಿಳಿಸಿದ್ದಾರೆ.

ಬ್ರಿಟನ್‌ನ ಐದು ಆಸ್ಪತ್ರೆಗಳಲ್ಲಿ 18ರಿಂದ 55 ವರ್ಷ ವಯಸ್ಸಿನ ಒಳಗಿನ ಒಟ್ಟು 1077 ಮಂದಿಗೆ ಲಸಿಕೆಯ ಡೋಸೇಜ್‌ಗಳನ್ನು ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನೀಡಲಾಯಿತು. ಇದು ಲಸಿಕೆಯ ಮೊದಲ ಹಂತದ ಹ್ಯೂಮನ್‌ ಟ್ರಯಲ್‌ ಆಗಿತ್ತು ಎನ್ನಲಾಗಿದ್ದು, ಇದರ ಫಲಿತಾಂಶವನ್ನು ಲ್ಯಾನ್ಸೆಟ್‌ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ADVERTISEMENT

ಪ್ರಯೋಗಕ್ಕೆ ಒಳಗಾದವರಲ್ಲಿ ಲಸಿಕೆ ನೀಡಿದ 56 ದಿನಗಳ ವರೆಗೆ ಪ್ರಬಲ ಪ್ರತಿರೋಧಕ ಶಕ್ತಿ ಸೃಷ್ಟಿಯಾಗಿರುವುದು ಮತ್ತು ಟಿ–ಕೋಶಗಳು ಉತ್ಪತ್ತಿಯಾಗಿರುವುದು ಕಂಡು ಬಂದಿದೆ. ಒಂದು ವರ್ಷದ ವರೆಗೆ ಕಾಯಿಲೆ ವಿರುದ್ಧ ರಕ್ಷಣೆ ಪಡೆಯಲು ಟಿ–ಕೋಶಗಳು ನಿರ್ಣಾಯಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಯೋಗದಲ್ಲಿ ನಾವು ಕಂಡುಕೊಂಡ ಸಂಗತಿಗಳು ಭರವಸೆ ಮೂಡಿಸಿವೆ. ಆದರೆ ಇದಿಷ್ಟೇ ಸಾಕೇ ಎಂಬುದರ ಬಗ್ಗೆ ಈಗಲೇ ಹೇಳು ಸಾಧ್ಯವಿಲ್ಲ ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಲಸಿಕೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಾವು ದೃಢೀಕರಿಸುವುದಕ್ಕೂ ಮೊದಲು ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಆದರೆ ಈ ಆರಂಭಿಕ ಫಲಿತಾಂಶಗಳು ಭರವಸೆಯನ್ನು ಮೂಡಿಸಿವೆ’ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಹೇಳಿದ್ದಾರೆ.

‘ಮೂರನೇ ಹಂತದ ಪ್ರಯೋಗಗಳಲ್ಲಿ ನಮ್ಮ ಲಸಿಕೆಯನ್ನು ಪರೀಕ್ಷಿಸುವುದನ್ನು ಮುಂದುವರಿಸುವುದರ ಜೊತೆಗೆ, ನಾವು ವೈರಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾಗಿದೆ .ಉದಾಹರಣೆಗೆ: SARS-CoV-2 ಸೋಂಕಿನಿಂದ ರಕ್ಷಿಸಲು ನಾವು ಎಷ್ಟು ಪ್ರಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಬೇಕಾಗಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ನಮ್ಮ ಲಸಿಕೆ ಪರಿಣಾಮಕಾರಿಯಾಗಿದ್ದರೆ, ಇದು ಭರವಸೆಯ ಆಯ್ಕೆಯಾಗಿರಲಿದೆ. ಈ ರೀತಿಯ ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಬಹುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.