ಪಹಲ್ಗಾಮ್ ದಾಳಿಕೋರರನ್ನು 'ಸ್ವಾತಂತ್ರ್ಯ ಹೋರಾಟಗಾರರು' ಎಂದು ಕರೆದ ಪಾಕಿಸ್ತಾನ ಉಪಪ್ರಧಾನಿ ಇಶಾಕ್ ದಾರ್ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕಿಟಿಗ ದನೀಶ್ ಕನೇರಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಘಟನೆಯು ಜಾಗತಿಕ ನಾಯಕರು ಖಂಡಿಸಿದ್ದಾರೆ. ಆದರೆ ಈ ದಾಳಿಯ ಭಯೋತ್ಪಾದಕರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಹೇಳಿದ್ದಾರೆ.
'ಇಶಾಕ್ ದಾರ್ ಭಯೋತ್ಪಾದಕರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕರೆದಿರುವುದು ಕೇವಲ ನಾಚಿಕೆಗೇಡಿನ ಸಂಗತಿಯಲ್ಲ. ಬಲಿಗೆ ಅದು ಸರ್ಕಾರವೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುವುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ' ಎಂದು ಕನೇರಿಯಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕೃತ್ಯಕ್ಕೆ ಪಾಕಿಸ್ತಾನದ ನೇರ ಸಹಕಾರವಿದೆ ಎಂದು ಭಾರತ ಪ್ರತಿಪಾದಿಸಿದೆ. ಭಾರತದ ಆರೋಪಗಳನ್ನು ಪಾಕ್ ನಿರಾಕರಿಸುತ್ತಲೇ ಬಂದಿದೆ. ಈ ನಡುವೆ ಗುರುವಾರ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉಪ ಪ್ರಧಾನಿ ಇಶಾಕ್ ದಾರ್, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ದಾಳಿ ನಡೆಸಿದವರು ಸ್ವಾತಂತ್ರ್ಯ ಹೋರಾಟಗಾರರಾಗಿರಬಹುದು ಎಂದು ಹೇಳಿದ್ದರು.
ಇದಕ್ಕೆ ತೀಕ್ಷವಾಗಿ ಪ್ರತಿಕ್ರಿಯಿಸಿದ ದನೀಶ್ ಕನೇರಿಯಾ, 'ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ನಿಜವಾಗಿಯೂ ಇಲ್ಲದಿದ್ದರೆ, ಪ್ರಧಾನಿ ಶಹಬಾಜ್ ಷರೀಫ್ ಅದರ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಲಿಲ್ಲ. ಅಲ್ಲದೇ ಸೇನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಎಚ್ಚರಿಕೆ ವಹಿಸಲು ಏಕೆ ಹೇಳಲಾಯಿತು' ಎಂದು ಪ್ರಶ್ನಿಸಿದ್ದಾರೆ.
'ಇದೆಲ್ಲವನ್ನು ಗಮನಿಸಿದರೆ ನಿಮಗೆ ಸತ್ಯ ತಿಳಿದಿದೆ ಎಂಬುದು ಸ್ಪಷ್ಟ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಭಯೋತ್ಪಾದನೆಯನ್ನು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು' ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.