ರಾಯಿಟರ್ಸ್ ಚಿತ್ರ
Pahalgam attack: Pakistan shuts ports for Indian ships after New Delhi bans imports from Islamabad
ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪಾಕಿಸ್ತಾನದಿಂದ ಸರಕುಗಳ ಆಮದು ಮತ್ತು ಪಾಕಿಸ್ತಾನಿ ಹಡಗುಗಳ ಪ್ರವೇಶದ ಮೇಲೆ ಭಾರತ ಶನಿವಾರ ನಿರ್ಬಂಧ ಹೇರಿತ್ತು.ಇದರ ಬೆನ್ನಲ್ಲೇ, ಪಾಕಿಸ್ತಾನ ತಿರುಗೇಟು ನೀಡಿದ್ದು, ಭಾರತೀಯ ಧ್ವಜ ವಾಹಕ ನೌಕೆಗಳು ತನ್ನ ಬಂದರುಗಳನ್ನು ಬಳಸುವುದನ್ನು ನಿಷೇಧಿಸಿದೆ.
ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ದೇಶವು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಪಾಕಿಸ್ತಾನದಿಂದ ಬರುವ ಅಥವಾ ಅದರ ಮೂಲಕ ಸಾಗುವ ಸರಕುಗಳ ಆಮದು ಮತ್ತು ಪಾಕಿಸ್ತಾನಿ ಹಡಗುಗಳ ಪ್ರವೇಶದ ಮೇಲೆ ನಿಷೇಧ ಹೇರಿದೆ.
ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ಶನಿವಾರ ತಡರಾತ್ರಿ ಯಾವುದೇ ಭಾರತೀಯ ಧ್ವಜ ವಾಹಕ ನೌಕೆಗಳು ಪಾಕಿಸ್ತಾನದ ಯಾವುದೇ ಬಂದರಿಗೆ ಆಗಮಿಸಲು ಅನುಮತಿಸುವುದಿಲ್ಲ ಎಂದು ಆದೇಶಿಸಿದೆ.
‘ನೆರೆಯ ರಾಷ್ಟ್ರದೊಂದಿಗಿನ ಕಡಲ ಪರಿಸ್ಥಿತಿಯ ಇತ್ತೀಚಿನ ಬೆಳವಣಿಗೆಯ ದೃಷ್ಟಿಯಿಂದ, ಕಡಲ ಸಾರ್ವಭೌಮತ್ವ, ಆರ್ಥಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಸಲುವಾಗಿ ಪಾಕಿಸ್ತಾನವು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಕ್ರಮಗಳನ್ನು ಜಾರಿಗೊಳಿಸುತ್ತದೆ: ಭಾರತೀಯ ಧ್ವಜ ವಾಹಕ ನೌಕೆಗಳು ಯಾವುದೇ ಪಾಕಿಸ್ತಾನಿ ಬಂದರಿಗೆ ಬರಲು ಅನುಮತಿಸಲಾಗುವುದಿಲ್ಲ, ಪಾಕಿಸ್ತಾನಿ ಧ್ವಜ ವಾಹಕ ನೌಕೆಗಳು ಯಾವುದೇ ಭಾರತೀಯ ಬಂದರಿಗೆ ತೆರಳುವದಿಲ್ಲ. ಆದ್ಯತೆ ಮೇರೆಗೆ ವಿನಾಯಿತಿ ನಿರ್ಧರಿಸಲಾಗುತ್ತದೆ’ಎಂದು ಪಾಕಿಸ್ತಾನದ ಕಡಲ ವ್ಯವಹಾರಗಳ ಸಚಿವಾಲಯದ ಬಂದರುಗಳು ಮತ್ತು ಹಡಗು ವಿಭಾಗವು ಶನಿವಾರ ತಡರಾತ್ರಿ ಹೊರಡಿಸಿದ ಆದೇಶವನ್ನು ಡಾನ್ ಪತ್ರಿಕೆ ಉಲ್ಲೇಖಿಸಿದೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದರು., ಅದರಲ್ಲಿ ಹೆಚ್ಚಿನವರು ಪ್ರವಾಸಿಗರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಹೊಸ ದಂಡನಾತ್ಮಕ ಕ್ರಮಗಳನ್ನು ಭಾರತ ಕೈಗೊಂಡಿದೆ. ಭಾರತವು ವಾಯು ಮತ್ತು ಭೂ ಮಾರ್ಗಗಳ ಮೂಲಕ ನೆರೆಯ ದೇಶದಿಂದ ಅಂಚೆ ಮತ್ತು ಪಾರ್ಸೆಲ್‌ಗಳ ವಿನಿಮಯವನ್ನು ಸಹ ಸ್ಥಗಿತಗೊಳಿಸಿದೆ.
ಭಾರತೀಯ ಬಂದರುಗಳಿಗೆ ಪಾಕಿಸ್ತಾನಿ ಹಡಗುಗಳ ಪ್ರವೇಶವನ್ನು ನಿಷೇಧಿಸುವುದರ ಜೊತೆಗೆ, ಭಾರತೀಯ ಹಡಗುಗಳೂ ಪಾಕಿಸ್ತಾನಿ ಬಂದರುಗಳಿಗೆ ತೆರಳುವುದನ್ನು ಭಾರತ ನಿಷೇಧಿಸಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿಎಸ್) ತಿಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಭಾರತ ಸರ್ಕಾರದ ಆದೇಶದ ಪ್ರಕಾರ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಆಧಾರದ ಮೇಲೆ ಪಾಕಿಸ್ತಾನದ ಎಲ್ಲ ಸರಕುಗಳ ಆಮದಿನ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.