ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಉಗ್ರನೆಲೆಗಳ ಮೇಲೆ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ನಡೆಸಿದ ಬಳಿಕ, ಪಾಕ್‌ನ ಭದ್ರತಾ ವ್ಯವಸ್ಥೆಯನ್ನು ತಿಳಿದುಕೊಳ್ಳಲು, ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ರಕ್ಷಣಾ ಸಭೆಯನ್ನು ನಡೆಸಲಾಗಿದೆ.
‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಮಾಡಲಾಗಿತ್ತು.
ಎರಡೂ ಗಂಟೆಗಳಿಗೂ ಅಧಿಕ ವೇಳೆ ಜರುಗಿದ ಪಾಕ್‌ನ ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‌ಎಸ್‌ಸಿ) ಸಭೆಯಲ್ಲಿ ಪ್ರಧಾನಿ ಶಹಬಾಜ್ ಷರೀಫ್, ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸೇನಾ ಮುಖ್ಯಸ್ಥರು, ದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ವಿಸ್ತ್ರುತ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ, ಇಂದು 3.30ಕ್ಕೆ ಮಂತ್ರಿಮಂಡಳ ಸಭೆಯನ್ನು ಕರೆಯಲಾಗಿದ್ದು, ನಂತರ ಸಂಸತ್ತಿನಲ್ಲಿ ಪಾಕ್‌ನ ಮುಂದಿನ ನಡೆಯ ಕುರಿತು ಮಹತ್ವದ ನಿರ್ಧಾರವಾಗುವ ಸಾಧ್ಯತೆಯಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನೆಲೆಗಳ ಮೇಲಿನ ದಾಳಿಯಲ್ಲಿ 26ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 46ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಭಾರತೀಯ ವಾಯುಪಡೆಯು ಪಾಕಿಸ್ತಾನದೊಳಗೆ ಹಾಗೂ ಪಾಕ್ ವಾಯುಪಡೆಯು ಭಾರತದೊಳಗೆ ತೆರಳಲು ಸಾಧ್ಯವಿಲ್ಲ. ಪಾಕಿಸ್ತಾನ ವಾಯುಪಡೆಯ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಲೆ. ಜನರಲ್ ಅಹಮದ್ ಶರೀಫ್ ಚೌದರಿ ತಿಳಿಸಿದರು.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.