ADVERTISEMENT

ಮಲಾಲಾ ಚಿತ್ರವಿದ್ದ ಪಠ್ಯಪುಸ್ತಕ ಮುಟ್ಟುಗೋಲು

ಪಿಟಿಐ
Published 13 ಜುಲೈ 2021, 14:54 IST
Last Updated 13 ಜುಲೈ 2021, 14:54 IST
ಮಲಾಲಾ ಯೂಸುಫ್‌ಝೈ
ಮಲಾಲಾ ಯೂಸುಫ್‌ಝೈ   

ಇಸ್ಲಾಮಾಬಾದ್: ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಅವರ ಚಿತ್ರವಿದ್ದ ಪಠ್ಯಪುಸ್ತಕಗಳನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿಯು (ಪಿಸಿಟಿಬಿ) ಮುಟ್ಟುಗೋಲು ಹಾಕಿಕೊಂಡಿದೆ.

ಮಲಾಲಾ ಅವರು ಇಸ್ಲಾಂ ಧರ್ಮದ ಕುರಿತು ನೀಡಿರುವ ಹೇಳಿಕೆಗಳು ವಿವಾದಾತ್ಮಕವಾಗಿರುವ ಹಿನ್ನೆಲೆಯಲ್ಲಿ ಅವರ ಚಿತ್ರವಿದ್ದ ಪಠ್ಯಪುಸ್ತಕಗಳನ್ನು ಪಿಸಿಟಿಬಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (ಒಯುಪಿ), ಪಂಜಾಬ್ ಪ್ರಾಂತ್ಯದ ಗ್ರೇಡ್‌–7ನೇ ತರಗತಿಗೆ ಸಾಮಾಜಿಕ ಅಧ್ಯಯನದ ಪುಸ್ತಕವೊಂದನ್ನು ಪ್ರಕಟಿಸಿದೆ. ಈ ಪುಸ್ತಕದಲ್ಲಿ 1965ರಲ್ಲಿ ಭಾರತದೊಂದಿಗೆ ನಡೆದ ಯುದ್ಧದಲ್ಲಿ ಮಡಿದ ಪಾಕಿಸ್ತಾನದ ಮಿಲಿಟರಿ ಅಧಿಕಾರಿ ಮೇಜರ್ ಅಜೀಜ್ ಭಟ್ಟಿ ಅವರ ಚಿತ್ರದ ಪಕ್ಕದಲ್ಲಿ ಮಲಾಲಾ ಚಿತ್ರವನ್ನೂ ಮುದ್ರಿಸಲಾಗಿದೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಸೇರಿದಂತೆ ಇತರ ಗಣ್ಯರ ಚಿತ್ರಗಳೂ ಇದರಲ್ಲಿವೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಆದರೆ, ಈ ಪುಸ್ತಕವನ್ನು ಪ್ರಕಟಿಸಲುಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ (ಒಯುಪಿ) ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿಲ್ಲ. 2019ರಲ್ಲಿ ಈ ಪುಸ್ತಕವವನ್ನು ಪರಿಶೀಲಿಸಿಲು ಪಿಸಿಟಿಬಿಗೆ ಕೋರಲಾಗಿತ್ತು. ಆದರೆ, ಪಿಸಿಟಿಬಿ ಪುಸ್ತಕ ಪ್ರಕಟಿಸಲು ಅನುಮೋದನೆ ನೀಡಿರಲಿಲ್ಲ’ ಎಂದು ಲಾಹೋರ್‌ನ ಒಯುಪಿ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಮಲಾಲಾ ಹುಟ್ಟುಹಬ್ಬದ ದಿನದಂದೇ (ಜುಲೈ 12) ಪಾಕಿಸ್ತಾನದ ಖಾಸಗಿ ಶಾಲೆಗಳ ಸಂಘವು, ಇಸ್ಲಾಂ ಕುರಿತು ಮಲಾಲಾ ನೀಡಿರುವ ವಿವಾದಾತ್ಮಕ ಹೇಳಿಕೆಗಳು, ಮದುವೆ ಮತ್ತು ಪಾಶ್ಚಿಮಾತ್ಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಲಾಹೋರ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯ ನಡೆಸಿದ ಪಾಕಿಸ್ತಾನದ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕಾಸಿಫ್‌ ಮಿರ್ಜಾ ಅವರು, ‘ನಾನು ಮಲಾಲಾ’ ಪುಸ್ತಕದಲ್ಲಿ ಮಲಾಲಾ, ಇಸ್ಲಾಂ ಧರ್ಮದ ಬೋಧನೆ, ಸಿದ್ಧಾಂತ ಮತ್ತು ಜಿನ್ನಾ ಅವರ ಕುರಿತು ವಿವಾದಾತ್ಮಕ ವಿಷಯ ಬರೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.