ADVERTISEMENT

ಸಿಂಧೂ ನದಿ: ನಿರ್ಮಾಣ ಕಾರ್ಯ ನಡೆದರೆ ನಾಶಪಡಿಸುತ್ತೇವೆ; ಪಾಕ್‌

ಪಿಟಿಐ
Published 4 ಮೇ 2025, 4:25 IST
Last Updated 4 ಮೇ 2025, 4:25 IST
   

ಇಸ್ಲಾಮಾಬಾದ್‌: ‘ಸಿಂಧೂ ನದಿಗೆ ಅಡ್ಡಲಾಗಿ ಭಾರತವು ಯಾವುದೇ ಹೊಸ ನಿರ್ಮಾಣ ಕಾರ್ಯಗಳನ್ನು ಕೈಗೊಂಡರೆ ಅದನ್ನು ಪಾಕಿಸ್ತಾನ ವಿರುದ್ಧದ ‘ಭಾರತದ ಆಕ್ರಮಣ’ ಎಂದೇ ಪರಿಗಣಿಸಿ, ಹೊಡೆದುರುಳಿಸಲಾಗುತ್ತದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್‌ ಎಚ್ಚರಿಕೆ ನೀಡಿದ್ದಾರೆ.

ಜಿಯೋ ನ್ಯೂಸ್‌ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆಕ್ರಮಣವು ಕೇವಲ ಫಿರಂಗಿ ಅಥವಾ ಗುಂಡುಗಳನ್ನು ಹಾರಿಸುವುದರಿಂದಷ್ಟೇ ನಡೆಯುವುದಿಲ್ಲ. ನೀರಿನ ಹರಿವನ್ನು ನಿರ್ಬಂಧಿಸುವುದು ಅಥವಾ ತಿರುಗಿಸುವುದು ಆಕ್ರಮಣದ ಮತ್ತೊಂದು ಮುಖವಾಗಿದೆ. ಇದರಿಂದ ಹಸಿವು ಮತ್ತು ಬಾಯಾರಿಕೆ ಉಂಟಾಗಿ ಸಾವುಗಳು ಸಂಭವಿಸುತ್ತವೆ’ ಎಂದು ಅವರು ಹೇಳಿದ್ದಾರೆ. 

‘ಹೀಗಾಗಿ, ಭಾರತವು ಸಿಂಧೂ ನದಿಗೆ ಸಂಬಂಧಿಸಿದಂತೆ ಯಾವುದೇ ಹೊಸ ನಿರ್ಮಾಣ ಕಾರ್ಯಕ್ಕೆ ಮುಂದಾದರೆ, ಅದನ್ನು ನಾವು ನಾಶಪಡಿಸುತ್ತೇವೆ’ ಎಂದು ಸಚಿವರು ತಿಳಿಸಿದ್ದಾರೆ. 

ADVERTISEMENT

ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ, ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧ ಕಡಿತವಾಗಿದೆ. ಪಾಕ್‌ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿರುವ ಭಾರತ, 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.