ADVERTISEMENT

ಪಾಕ್‌ನಲ್ಲಿ ಹಿಂದೂ ಮಹಿಳೆಯರನ್ನು ಅಪಹರಿಸಿ ಏನ್ ಮಾಡ್ತರೆ ಗೊತ್ತಾ?

ಪಿಟಿಐ
Published 9 ಡಿಸೆಂಬರ್ 2025, 10:29 IST
Last Updated 9 ಡಿಸೆಂಬರ್ 2025, 10:29 IST
   

Pak Hindu woman, minor daughter kidnapped in Karachi

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಅಪಹರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಂಧ್ ಪ್ರಾಂತ್ಯದಲ್ಲಿ ಮಂಗಳವಾರ(ಡಿ.09) ಹಿಂದೂ ಮಹಿಳೆ ಮತ್ತು ಆಕೆಯ ಮಗಳನ್ನು ಬಂದೂಕುಧಾರಿ ದುಷ್ಕರ್ಮಿಗಳು ಅಪಹರಿಸಿದ್ದಾರೆ ಕರಾಚಿಯ ಶೇರ್ ಶಾ ಪ್ರದೇಶದ ಸಿಂಧಿ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆ ತನ್ನ ಮಗಳೊಂದಿಗೆ ಮನೆಯಿಂದ ಹೊರಬಂದ ಕೂಡಲೇ ಮೂವರು ಬಂದೂಕುಧಾರಿ ವ್ಯಕ್ತಿಗಳು, ಬಲವಂತವಾಗಿ ಆಲ್ಟೊ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಈ ಘಟನೆಯು ಸಮುದಾಯದಲ್ಲಿ ಭಾರಿ ಅತಂಕಕ್ಕೆ ಎಡೆಮಾಡಿದೆ.

ADVERTISEMENT

ರಾಣಿ ಮತ್ತು ಅವರ ಅಪ್ರಾಪ್ತ ಮಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಅಪಹರಣಕಾರರಲ್ಲಿ ಒಬ್ಬರಿಗೆ ಮದುವೆ ಮಾಡುತ್ತಾರೆ ಎಂಬ ಆತಂಕದಲ್ಲಿ ಅವರ ಕುಟುಂಬ ಇದೆ ಎಂದು ಸಿಂಧ್ ಪ್ರಾಂತ್ಯದ ಹಿಂದೂ ಸಮುದಾಯದ ನಾಗರಿಕ ಹಕ್ಕುಗಳ ಹೋರಾಟಗಾರ ಶಿವ ಕಾಚಿ ಹೇಳಿದ್ದಾರೆ.

ಪ್ರಕರಣ ಸಂಬಂಧ ದೂರು ದಾಖಲಿಸಿದ್ದೇವೆ. ಆದರೆ, ಮೂವರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಹಿಂದೂ ಸಮುದಾಯದ ತಾಯಿ ಮತ್ತು ಅವರ ಮಗಳನ್ನು ಅಪಹರಿಸಿದ ರೀತಿ ತೀವ್ರ ಆತಂಕಕಾರಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಆಗಾಗ್ಗೆ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ವಯಸ್ಸಾದ ಮುಸ್ಲಿಂ ವ್ಯಕ್ತಿಗಳ ಜೊತೆ ಮದುವೆ ಮಾಡಲಾಗುತ್ತಿರುವುದರಿಂದ ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಮದು ಅವರು ಮನವಿ ಮಾಡಿದ್ದಾರೆ.

ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸುವ ಈ ಕೃತ್ಯದಲ್ಲಿ ಭಾಗಿಯಾಗಿರುವ ಗುಂಪುಗಳಿಂದ ತಮಗೆ ಜೀವ ಬೆದರಿಕೆ ಇದೆ ಎಂದೂ ಅವರ ಹೇಳಿದ್ದಾರೆ.

ಫೋನ್ ಮೂಲಕ ನನಗೆ ಕೊಲೆ ಬೆದರಿಕೆ ಬಂದಿದೆ. ಆದರೂ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ಈ ನಡುವೆ, ಸಿಂಧ್ ಪ್ರಾಂತ್ಯದ ಉಮರ್ಕೋಟ್ ನಗರದಲ್ಲಿ ಮತ್ತೊಬ್ಬ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದಾರೆ.

ಭಾಗ್ವಿ ಎಂಬ ಮಹಿಳೆ ತನ್ನ ಪತಿಯ ಜೊತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಅಪಹರಣಕ್ಕೆ ಯತ್ನಿಸಿದೆ. ಸ್ಥಳದಲ್ಲಿದ್ದ ಜನ ಮಧ್ಯಪ್ರವೇಶಿಸಿದ್ದರಿಂದ ಅವರ ಯತ್ನ ವಿಫಲವಾಗಿದೆ.

ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ ಬಲವಂತವಾಗಿ ಮತಾಂತರ, ಮರು ಮದುವೆ

ಮೇ 28ರಂದು ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಮುಸ್ಲಿಂ ಪುರುಷನೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿತ್ತು. ಶೆಹಬಾಜ್ ಖಾಷ್ಖೇಲಿ ಮತ್ತು ಅವನ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಅಪಹರಣಕ್ಕೊಳಗಾದ ಮಹಿಳೆಯ ಪತಿ ಹೇಳಿದ್ದಾರೆ.

ಮಹಿಳೆಯನ್ನು ಇಸ್ಲಾಂ ಧಾರ್ಮಿಕ ಕೇಂದ್ರಕ್ಕೆ ಕರೆದೊಯ್ದು ಇಸ್ಲಾಂಗೆ ಮತಾಂತರಿಸಿ, ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ನ್ಯಾಯ ಇದೇನಾ ಎಂದು ಅವರು ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.