ADVERTISEMENT

ಪಾಕ್‌ನಲ್ಲಿ ಭಾರತೀಯ ಸಿನಿಮಾ ಸಿ.ಡಿ ಗಳ ಮುಟ್ಟುಗೋಲು

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 11:42 IST
Last Updated 16 ಆಗಸ್ಟ್ 2019, 11:42 IST
   

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ಸಿನಿಮಾಗಳ ಸಿ.ಡಿ ಮಾರಾಟ ವಿರುದ್ಧಕಠಿಣ ಕಾನೂನು ಕ್ರಮ ಕೈಗೊಂಡಿದೆ.

ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (ಪೆಮ್ರಾ) ಅನ್ವಯ, ಭಾರತದ ಕಲಾವಿದರು ನಟಿಸಿರುವ ಜಾಹೀರಾತು ಮತ್ತು ಭಾರತ ಉತ್ಪಾದಿತ ವಸ್ತುಗಳ ಜಾಹೀರಾತುಗಳ ಪ್ರಸಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

‘ನಾವು ಭಾರತದ ಜಾಹೀರಾತುಗಳನ್ನು ನಿಷೇಧಿಸಿದ್ದೇವೆ. ಭಾರತೀಯ ಸಿನಿಮಾಗಳ ಸಿ.ಡಿಗಳನ್ನು ಮುಟ್ಟುಗೋಲು ಹಾಕಲು, ಸಿ.ಡಿ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದೇವೆ’ ಎಂದು ಪಾಕ್ ಪ್ರಧಾನಿಯ ವಿಶೇಷ ಸಹಾಯಕಿ ಫಿರ್ದೋಸ್ ಅಶಿಖ್ ಅವಾನ್ ಹೇಳಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಆಂತರಿಕ ಸಚಿವಾಲಯವು ಸಿ.ಡಿ. ಅಂಗಡಿಗಳ ಮೇಲೆ ದಾಳಿ ನಡೆಸಿ, ಹಲವು ಭಾರತೀಯ ಸಿನಿಮಾಗಳ ಸಿ.ಡಿ.ಗಳನ್ನು ಮುಟ್ಟುಗೋಲು ಹಾಕಿದೆ. ಈ ಕ್ರಮ ಶೀಘ್ರದಲ್ಲೇ ಪಾಕ್‌ನ ಇತರ ಕಡೆಗಳಲ್ಲೂ ಜಾರಿಯಾಗಲಿದೆ’ ಎಂದು ಫಿರ್ದೋಸ್ ತಿಳಿಸಿದ್ದಾರೆ.

ಭಾರತೀಯ ಸಿನಿಮಾ ಮತ್ತು ಜಾಹೀರಾತುಗಳ ನಿರ್ಬಂಧ ಕುರಿತು ‘ಪೆಮ್ರಾ’ ಆಗಸ್ಟ್ 14ರಂದು ಪತ್ರದ ಮೂಲಕ ಸೂಚನೆ ನೀಡಿತ್ತು. ಕಳೆದ ವರ್ಷ ಪಾಕಿಸ್ತಾನ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ‘ಪೆಮ್ರಾ’ ಈಗಾಗಲೇ ಭಾರತೀಯ ವಾಹಿನಿಗಳ ಪ್ರಸಾರವನ್ನು ಹಿಂತೆಗೆದುಕೊಂಡಿದೆ. ಆದರೂ, ಈ ನಡುವೆ ಭಾರತದಲ್ಲಿ ನಿರ್ಮಾಣವಾದ ಮತ್ತು ಭಾರತೀಯ ಪಾತ್ರಗಳು ಇರುವ ಹಲವು ಉತ್ಪನ್ನಗಳ ಜಾಹೀರಾತುಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಸಾರವಾಗಿವೆ ಎಂದು ‘ಪೆಮ್ರಾ’ ಪತ್ರದಲ್ಲಿ ಉಲ್ಲೇಖಿಸಿದೆ.

‘ಈಗಾಗಲೇ ಡೆಟಾಲ್ ಸೋಪ್, ಸರ್ಫ್ ಎಕ್ಸೆಲ್ ಪೌಡರ್, ಪ್ಯಾಂಟೀನ್ ಶ್ಯಾಂಪೂ, ಹೆಡ್ ಅಂಡ್ ಶೋಲ್ಡರ್ ಶ್ಯಾಂಪೂ, ಲೈಫ್‌ಬಾಯ್ ಸೋಪ್, ಫಾಗ್ ಬಾಡಿ ಸ್ಪ್ರೇ, ಸನ್‌ಸಿಲ್ಕ್ ಶ್ಯಾಂಪೂ,ನೂರ್ ನೂಡಲ್ಸ್, ಫೇರ್ ಅಂಡ್ ಲವ್ಲಿ ಫೇಸ್ ವಾಶ್ ಮತ್ತು ಸೇಫ್‌ಗಾರ್ಡ್ ಸೋಪುಗಳ ಜಾಹೀರಾತುಗಳನ್ನು ನಿಷೇಧಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ವಿಷಯವು ಭಾರತದ ಆಂತರಿಕ ವಿಷಯವಾಗಿದೆ ಎಂದು ಭಾರತವು ಈಗಾಗಲೇ ಅಂತರರಾಷ್ಟ್ರೀಯ ಸಮುದಾಯಗಳಿಗೆ ಸ್ಪಷ್ಟವಾಗಿ ಹೇಳಿದೆ. ಈ ವಿಷಯನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು ಎಂದೂ ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.