ADVERTISEMENT

ಹಿಂದೂ ಸಮುದಾಯದ ಭಾವನೆಗೆ ಧಕ್ಕೆ: ಕ್ಷಮೆಯಾಚಿಸಿದ ಪಾಕ್‌ ಸಂಸದ

ಪಿಟಿಐ
Published 25 ಫೆಬ್ರುವರಿ 2021, 8:14 IST
Last Updated 25 ಫೆಬ್ರುವರಿ 2021, 8:14 IST
ಪಾಕಿಸ್ತಾನ ಧ್ವಜ
ಪಾಕಿಸ್ತಾನ ಧ್ವಜ   

ಕರಾಚಿ: ‘ಪಾಕಿಸ್ತಾನದ ಅಲ್ಪ ಸಂಖ್ಯಾತ ಹಿಂದೂ ಸಮುದಾಯಕ್ಕೆ ಅಗೌರವ ತೋರುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದ ಪಾಕಿಸ್ತಾನದ ಸಂಸದಅಮೀರ್ ಲಿಯಾಕತ್ ಹುಸೇನ್ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪಾಕಿಸ್ತಾನದ ಹಲವು ಸಂಘಟನೆಗಳು ಒತ್ತಾಯಿಸಿವೆ. ಇದರ ಬೆನ್ನಲ್ಲೇ ಕ್ಷಮೆ ಯಾಚಿಸಿರುವ ಸಂಸದ, ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ಪಾಕಿಸ್ತಾನದ ಆಡಳಿತಾರೂಢ ಪಕ್ಷ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌(ಪಿಟಿಐ) ಸಂಸದ ಅಮೀರ್ ಲಿಯಾಕತ್ ಹುಸೇನ್, ಹಿಂದೂ ದೇವತೆಯ ಚಿತ್ರವನ್ನು ಬಳಸಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪುತ್ರಿ ಮತ್ತು ವಿರೋಧ ಪಕ್ಷದ ನಾಯಕಿ ಮರಿಯಂ ನವಾಜ್‌ ಅವರನ್ನು ಟ್ವಿಟರ್‌ನಲ್ಲಿ ಅ‍ಪಹಾಸ್ಯ ಮಾಡಿದ್ದರು.

ಇದಕ್ಕೆ ಹಿಂದೂ ಸಮುದಾಯದವರು ಮತ್ತು ಹಲವು ರಾಜಕೀಯ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ADVERTISEMENT

‘ತನ್ನನ್ನು ಧಾರ್ಮಿಕ ವಿದ್ವಾಂಸ ಎಂದು ಹೇಳಿಕೊಳ್ಳುವವರಿಗೆ ಬೇರೆ ಧರ್ಮಗಳನ್ನು ಹೇಗೆ ಗೌರವಿಸಬೇಕು ಎಂಬುದರ ಬಗ್ಗೆ ಅರಿವಿಲ್ಲ. ಇದೊಂದು ನಾಚಿಗೇಡಿನ ಕೃತ್ಯ. ಈ ಟ್ವೀಟ್‌ ಅನ್ನು ಆದಷ್ಟು ಬೇಗ ಡಿಲೀಟ್‌ ಮಾಡಿ, ಇಲ್ಲದಿದ್ದರೆ ಧರ್ಮ ನಿಂದನೆ ಕಾಯ್ದೆಯಡಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇವೆ. ಅಲ್ಲದೆ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತೇವೆ’ ಎಂದು ಪಾಕಿಸ್ತಾನಿ ಹಿಂದೂ ಕೌನ್ಸಿಲ್‌ನ ಮುಖ್ಯಸ್ಥ ರಮೇಶ್‌ ಕುಮಾರ್‌ ವಕ್ವಾಣಿ ಅವರು ಟ್ವೀಟ್‌ ಮಾಡಿದ್ದಾರೆ.

ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿರುವ ಹುಸೇನ್, ‘ಹಿಂದೂ ಸಮುದಾಯದವರ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಇದನ್ನು ನನಗೆ ನನ್ನ ಧರ್ಮ ಕಲಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.